ಸೌಕರ್ಯವಂಚಿತ ತಂಗುದಾಣಗಳು

1808wdgr01
ಗಡ್ಡೆಸುಗೂರ ಗ್ರಾಮದ ಮುಖ್ಯ ರಸ್ತೆಯಲ್ಲಿ ಪಾಳುಬಿದ್ದ ಮಿನಿ ಬಸ್ ನಿಲ್ದಾಣ.
Published on

ಖಾಜಾಹುಸೇನ್ ಕೋನಹಳ್ಳಿ ವಡಗೇರಾ: ತಾಲೂಕಿನ ಬಹುತೇಕ ಗ್ರಾಮಗಳಿಂದ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವ ಜನರಿಗೆ ಅನುಕೂಲವಾಗಲು ಸರ್ಕಾರ ಸುಮಾರು ವರ್ಷಗಳ ಹಿಂದೆ ನಿರ್ಮಿಸಿರುವ ಮಿನಿ ತಂಗುದಾಣಗಳು ಸಂಪೂರ್ಣ ನಿರ್ಲಕ್ಷ್ಯಕ್ಕೊಳಪಟ್ಟಿವೆ. ಸಮರ್ಪಕ ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದು, ಜನರು ನಿಲ್ಲಲೂ ಆಗದಂಥ ದಯನೀಯ ಸ್ಥಿತಿಗೆ ಬಂದಿವೆ.

ಗ್ರಾಮದಿಂದ ಒಂದೆರಡು ಕಿಲೋ ಮೀಟರ್ ಅಂತರದಲ್ಲಿ ಬಸ್‌ಗಳು ನಿಲ್ಲುತ್ತವೆ. ಅಲ್ಲಿ ಪ್ರಯಾಣಿಕರಿಗಾಗಿ ನಿರ್ಮಿಸಿರುವ ಗಡ್ಡೆಸುಗೂರ, ತುಮಕೂರು, ಹಾಲಗೇರಾ, ರೊಟ್ನಡಗಿ, ಕದರಾಪುರ, ಇಟಗಾ ಮತ್ತು ಹಬಸಿಹಾಳ ಇತರ ಮಿನಿ ಬಸ್ ನಿಲ್ದಾಣಗಳು ಹಾಳುಕೊಂಪೆಯಂತಾಗಿ ಮಾರ್ಪಟ್ಟಿವೆ.

ತುಮಕೂರ ತಂಗುದಾಣದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದ್ದು, ಸಿಮೆಂಟ್, ಕಲ್ಲುಗಳು ಅಲ್ಲಲ್ಲಿ ಕಿತ್ತು ಹೋಗಿವೆ. ಛಾವಣಿ ಕೂಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಹಾಲಗೇರಾ ತಂಗುದಾಣದ ಗೋಡೆಗಳು ಬಿರುಕು ಬಿಟ್ಟಿವೆ. ಇದರಿಂದ ಜನರು ಒಳಗಡೆ ಕುಳಿತುಕೊಳ್ಳಲು ಭಯ ಪಡುವಂತಾಗಿದೆ.

ಮಳೆಗಾಲ, ಬೇಸಿಗೆಯಲ್ಲಿ ಪ್ರಯಾಣಿಕರಿಗೆ ಆಶ್ರಯ ನೀಡಬೇಕಿದ್ದ ತಂಗುದಾಣಗಳು ನಿರ್ವಹಣೆ ಇಲ್ಲದೆ ಅವಸಾನದತ್ತ ಹೆಜ್ಜೆ ಹಾಕುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಯಾಣಿಕರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮೀಣ ಜನರು ಅಳಲು ತೋಡಿಕೊಳ್ಳುತ್ತಾರೆ.
ಸಂಬಂಧಿಸಿದ ಅಧಿಕಾರಿಗಳು ಈಗಲಾದರೂ ಇತ್ತ ಗಮನಹರಿಸಿ ಮಿನಿ ಬಸ್ ನಿಲ್ದಾಣಗಳಿಗೆ ಕಾಯಕಲ್ಪ ನೀಡಿ ಜನರಿಗೆ ಅನುಕೂಲ ಮಾಡಿಕೊಡುವುದು ಜರೂರಿಯಾಗಿದೆ.

ವಡಗೇರಾ ತಾಲೂಕಿನ ಕೆಲ ಗ್ರಾಮಗಳಲ್ಲಿ ಮಿನಿ ಬಸ್ ನಿಲ್ದಾಣಗಳು ನಿರ್ವಹಣೆ ಇಲ್ಲದೆ ಪಾಳು ಬಿದ್ದಿದ್ದು ಗಮನಕ್ಕೆ ಬಂದಿದೆ. ಅನುದಾನ ಬಂದ ಕೂಡಲೇ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಆದಷ್ಟು ಬೇಗ ದುರಸ್ತಿ ಮಾಡಲಾಗುವುದು.
| ಚನ್ನಾರಡ್ಡಿ ಪಾಟೀಲ್ ತುನ್ನೂರ ಯಾದಗಿರಿ ಶಾಸಕ

ಹಳ್ಳಿಗಳ ಹೊರವಲಯದಲ್ಲಿರುವ ಅನೇಕ ಮಿನಿ ಬಸ್ ತಂಗುದಾಣಗಳು ಶಿಥಿಲಾವಸ್ಥೆ ತಲುಪಿವೆ. ಇದರಿಂದ ಜನ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ದುರಸ್ತಿ ಮಾಡಿ ಜನತೆಗೆ ಅನುವು ಮಾಡಿಕೊಡಬೇಕು.
| ರಾಜಶೇಖರ ಕಾಡಂನೋರ್ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net