

ವಿಜಯವಾಣಿ ಸುದ್ದಿಜಾಲ ಆನೇಕಲ್
ತಾಲೂಕಿನ ಏಕೈಕ ಪದವಿ ಕಾಲೇಜು, ಆನೇಕಲ್ ನಗರದಲ್ಲಿನ ಡಾ.ಎಸ್.ಗೋಪಾಲರಾಜು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಮಳೆ ಬಂದರೆ ಸೋರುವ ಛಾವಣಿ, ಭದ್ರತೆ ಇಲ್ಲದ ಆವರಣ, ಶೌಚಗೃಹಕ್ಕೆ ಪರದಾಟ ಸೇರಿ ಹಲವು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಎದುರಿಸುತ್ತಿದ್ದಾರೆ.
ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಬಿಎ, ಬಿಸಿಎ ಸೇರಿ ನಾಲ್ಕು ವಿಭಾಗಗಳಿದ್ದು, 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಕಾಲೇಜಿನಲ್ಲಿ ಮೂಲಸೌಲಭ್ಯದ ಕೊರತೆ ಇದೆ.
ಅಕ್ರಮ ಚಟುವಟಿಕೆಗಳ ತಾಣ: ಕಾಲೇಜಿನಲ್ಲಿ 12 ಕೊಠಡಿಗಳು ಮಾತ್ರ ಬಳಕೆಯಾಗುತ್ತಿವೆ. ಇನ್ನುಳಿದ 6 ಕೊಠಡಿಗಳು ಮಳೆ ಬಂದರೆ ಸೋರುತ್ತವೆ. ಮಳೆ ಬಂದಾಗ ತರಗತಿಗಳನ್ನು ಒಟ್ಟುಗೂಡಿಸಿ ಪಾಠ ಮಾಡಬೇಕಾದ ಪರಿಸ್ಥಿತಿಯಿದೆ. ಕಟ್ಟಡ ನಿರ್ಮಾಣವಾಗಿ ಸುಮಾರು 40 ವರ್ಷ ಕಳೆದಿರುವುದರಿಂದ ಶಿಥಿಲವಾಗಿದ್ದು, ಈ ಕೊಠಡಿಗಳಿಗೆ ಕಾಯಕಲ್ಪ ಸಿಗಬೇಕಿದೆ. ಇನ್ನು ಕಾಲೇಜು ಮೈದಾನದಲ್ಲಿ ಹೊಸದಾಗಿ ಕೊಠಡಿ ನಿರ್ಮಿಸಲಾಗಿದೆ. ಆದರೆ, ಕಟ್ಟಡಗಳಿಗೆ ಕಾಂಪೌಂಡ್ ವ್ಯವಸ್ಥೆಯಿಲ್ಲ. ಹಾಗಾಗಿ ಸಂಜೆಯಾದರೆ ಅಕ್ರಮ ಚಟುವಟಿಕೆಯ ಅಡ್ಡೆಯಾಗುತ್ತಿದೆ.
ಭದ್ರತೆ ಕಲ್ಪಿಸಿ: ಕೊಠಡಿಗಳಲ್ಲಿ ಸುಸಜ್ಜಿತ ಪೀಠೋಪಕರಣಗಳ ವ್ಯವಸ್ಥೆಯಿಲ್ಲ. ಹಳೆಯ ಕಾಲದ ಬ್ಲ್ಯಾಕ್ ಬೋರ್ಡ್‌ಗಳಿವೆ. ಆಧುನಿಕತೆಗೆ ತಕ್ಕಂತೆ ಗ್ರೀನ್‌ಬೋರ್ಡ್ ಅಥವಾ ವೈಟ್ ಬೋರ್ಡ್‌ಗಳ ವ್ಯವಸ್ಥೆಯಾಗಬೇಕಿದೆ. ತಂತ್ರಜ್ಞಾನ ಬಳಸಿಕೊಂಡು ತರಗತಿ ನಡೆಸಲು ಸ್ಮಾರ್ಟ್‌ಕ್ಲಾಸ್ ನಿರ್ಮಿಸಬೇಕಿದೆ. ಕಿಟಕಿಯ ಗಾಜುಗಳು ಒಡೆದು ಹೋಗಿದ್ದು, ಕಟ್ಟಡವನ್ನು ಹೈಟೆಕ್‌ಗೊಳಿಸಬೇಕು. ಜತೆಗೆ ತುರ್ತಾಗಿ ಭದ್ರತಾ ವ್ಯವಸ್ಥೆ ಒದಗಿಸಬೇಕಿದೆ ಎಂಬುದು ವಿದ್ಯಾರ್ಥಿಗಳ ಒತ್ತಾಯವಾಗಿದೆ.
ನಿರ್ವಹಣೆಯಿಲ್ಲದ ಶೌಚಗೃಹ: ಕಾಲೇಜಿನಲ್ಲಿ ಶೌಚಗೃಹಗಳ ಕೊರತೆ ಇದ್ದು, ನೀರಿನ ಸಮಸ್ಯೆ ಕಾಡುತ್ತಿದೆ. ಸುಮಾರು 10 ವರ್ಷದ ಹಿಂದೆ 7.8 ಲಕ್ಷ ರೂ.ವೆಚ್ಚದಲ್ಲಿ ಕಾಲೇಜಿಗೆಂದು ನಿರ್ಮಿಸಿದ ಶೌಚಗೃಹವು ನಿರ್ವಹಣೆಯಿಲ್ಲದೆ ಪಾಳುಬಿದ್ದಿದೆ. ಹಾಗಾಗಿ ಶೌಚಗೃಹ ಕಟ್ಟಡವನ್ನು ದುರಸ್ತಿಗೊಳಿಸಿ, ಪೈಪ್ ವ್ಯವಸ್ಥೆ ಕಲ್ಪಿಸಿ, ನೀರಿನ ಸೌಕರ್ಯ ಒದಗಿಸಬೇಕಿದೆ ಎಂಬುದು ವಿದ್ಯಾರ್ಥಿಗಳ, ಪಾಲಕರ ಒತ್ತಾಯವಾಗಿದೆ.
ಆನೇಕಲ್‌ನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ತೆರೆಯುವಂತೆ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಕಾಲೇಜು ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.ಬಿ.ಶಿವಣ್ಣ ಶಾಸಕ, ಆನೇಕಲ್ ಕಾಲೇಜಿನಲ್ಲಿ ಭದ್ರತೆ ವ್ಯವಸ್ಥೆಯಿಲ್ಲ. ಹಾಗಾಗಿ ಕಾಲೇಜಿನ ಕಟ್ಟಡಗಳು ಹಾಳಾಗಿವೆ. ಕಾಯಂ ಭದ್ರತಾ ಸಿಬ್ಬಂದಿಯನ್ನು ಕಾಲೇಜಿನ ಗೇಟ್ ಬಳಿ ನಿಯೋಜಿಸಬೇಕು. ತರಗತಿಗಳಿಗೆ ಪೀಠೋಪಕರಣಗಳ ವ್ಯವಸ್ಥೆ ಸಹ ಒದಗಿಸಬೇಕು. ಅನವಶ್ಯಕವಾಗಿ ಕಾಲೇಜು ಒಳಗೆ ಬರುವವರನ್ನು ತಡೆಯಬೇಕು.ಡಾ.ಚಿನ್ನಪ್ಪ ವೈ.ಚಿಕ್ಕಹಾಗಡೆ ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಮತ್ತು ಕಾಲೇಜಿನ ಹಳೇ ವಿದ್ಯಾರ್ಥಿ