ಸೌಕರ್ಯ ವಂಚಿತ ದೊಣಬಘಟ್ಟ ಶಾಲೆ

26bdvt3
ದೊಣಬಘಟ್ಟದ ಗ್ರಾಮದ ಸರ್ಕಾರಿ ಕನ್ನಡ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ.
Published on

ಬಸವರಾಜ್ ಭದ್ರಾವತಿ

ಸುಮಾರು 10 ಸಾವಿರ ಉರ್ದು ಭಾಷಿಕರಿರುವ ದೊಣಬಘಟ್ಟ ಗ್ರಾಮದಲ್ಲಿರುವ ಏಕೈಕ ಸರ್ಕಾರಿ ಕನ್ನಡ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮೂಲ ಸೌಕರ್ಯಗಳಿಂದ ವಂಚಿತವಾಗಿ ನಲುಗುತ್ತಿದೆ.

1ನೇ ತರಗತಿಯಿಂದ 8ನೇ ತರಗತಿವರೆಗೂ ಶಿಕ್ಷಣ ನೀಡುತ್ತಿರುವ ಈ ಸರ್ಕಾರಿ ಕನ್ನಡ ಶಾಲೆಯಲ್ಲಿ 92 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. 8 ಮಂದಿ ಉತ್ತಮ ಶಿಕ್ಷಕರಿದ್ದಾರೆ. ಆದರೆ ಶಾಲಾ ಆವರಣದಲ್ಲಿ ಕುಡಿಯುವ ನೀರು, ಶೌಚಗೃಹ, ಸುಸಜ್ಜಿತ ಕಟ್ಟಡದ ವ್ಯವಸ್ಥೆ ಇಲ್ಲದಂತಾಗಿದೆ. ಮಳೆಯಲ್ಲಿ ತೋಯ್ದು ಬಿರುಕುಬಿಟ್ಟ ಗೋಡೆಗಳು. ಇನ್ನೇನು ಬೀಳುವ ಹಂತ ತಲುಪಿರುವ ಗೋಡೆಗಳ ನಡುವೆ ಮಕ್ಕಳು ಶಿಕ್ಷಣ ಕಲಿಯುವುದು ದುಸ್ತರವಾಗಿದೆ. ಗೋಡೆ ಯಾವಾಗ ಬೀಳುತ್ತದೆ ಎಂಬ ಆತಂಕ ಶಿಕ್ಷಕರನ್ನು ಕಾಡುತ್ತಿದೆ.

ಇರುವ 5 ಕೊಠಡಿಗಳಲ್ಲಿ 2 ಕೊಠಡಿಗಳು ಮಾತ್ರ ಸ್ವಲ್ಪ ಚೆನ್ನಾಗಿವೆ. ಉಳಿದ 3 ಕೊಠಡಿಗಳು ಸಂಪೂರ್ಣ ಹಾಳಾಗಿವೆ. ಮಳೆ ಬಂದರೆ ಶಾಲಾ ಕಾಂಪೌಂಡ್‌ನೊಳಗೆ ನಾಲೆಯಂತೆ ರಭಸವಾಗಿ ನೀರು ಹರಿಯುತ್ತದೆ. ಕೊಠಡಿಯ ಹೆಂಚುಗಳು ಒಡೆದುಹೋಗಿದ್ದು ಮಳೆಯ ನೀರು ಕೊಠಡಿಗಳ ತುಂಬೆಲ್ಲಾ ಆವರಿಸುತ್ತದೆ. ಮಕ್ಕಳನ್ನು ಮಳೆಯಲ್ಲಿ ಮನೆಗೆ ಕಳುಹಿಸಲು ಆಗದೆ, ಬೇರೆ ಕೊಠಡಿಗೆ ಸ್ಥಳಾಂತರಿಸಲೂ ಆಗದೆ ಮಕ್ಕಳು ಮಳೆ ನೀರಿನಲ್ಲಿಯೇ ಕುಳಿತುಕೊಳ್ಳಬೇಕಾದ ಸ್ಥಿತಿಯಿದೆ. ಮಕ್ಕಳಿಗೆ ಊಟ ತಯಾರಿಸುವ ದಾಸೋಹ ಕೊಠಡಿಯೂ ಅವ್ಯವಸ್ಥೆಯಿಂದ ಕೂಡಿದೆ.

ಮಳೆ ಬಂದರೆ ನೀರು ಶಾಲೆ ಒಳಗೆ ಬರುತ್ತದೆ. ಗ್ರಾಮದ ಕೆಲ ಪುಂಟರು ಶಾಲೆಯ ಹೆಂಚು ಒಡೆದು ಒಳಗಡೆ ಗಲೀಜು ಮಾಡುತ್ತಾರೆ. ಆಟ ಆಡಲು ಮೈದಾನ ಇಲ್ಲ. ಶೌಚಗೃದ ದುರ್ನಾತದ ನಡುವೆ ಪಾಠ ಕೇಳಬೇಕು ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡಿದ್ದಾರೆ.

ಕೊಠಡಿಯೊಳಗೆ ಶೌಚಗೃಹ!

ಶಾಲಾ ಆವರಣದಲ್ಲಿ ಶೌಚಗೃಹ ನಿರ್ಮಿಸುವುದು ಸಾಮಾನ್ಯ. ಆದರೆ ಈ ಶಾಲೆಯಲ್ಲಿ 5ನೇ ತರಗತಿಯ ಶಾಲಾ ಕೊಠಡಿಯೊಳಗೆ ಶೌಚಗೃಹ ನಿರ್ಮಿಸಿದ್ದಾರೆ. ಮಕ್ಕಳು ಕುಳಿತುಕೊಳ್ಳುವ ಬೆಂಚಿನ ಹಿಂದೆಯೇ ಶೌಚಗೃಹವಿದೆ. ಬಾಗಿಲು ಮುರಿದಿದ್ದು ಮಕ್ಕಳು ಹೋಗುವಾಗ ಇಡೀ ಬಾಗಿಲನ್ನೇ ಒಂದೆಡೆ ಸರಿಸಿ ಒಳ ಹೋಗಬೇಕು. ವಾಸನೆಯಲ್ಲಿಯೇ ಕುಳಿತು ಮಕ್ಕಳು ಪಾಠ ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಶಾಲೆಯಲ್ಲಿ ಹೆಸರಿಗೆ 3 ಶೌಚಗೃಹಗಳಿದ್ದರೂ ಉಪಯೋಗಕ್ಕೆ ಬಾರದಂತಾಗಿವೆ. ಊರ್ದು ಭಾಷಿಗರೇ ಹೆಚ್ಚಿನ ಸಂಖ್ಯೆಯಲ್ಲಿರುವ ಈ ಭಾಗದಲ್ಲಿ ಕನ್ನಡ ಶಾಲೆಯೊಂದು ಉತ್ತಮವಾಗಿ ನಡೆಯುತ್ತಿದ್ದರೂ ಮೂಲ ಸೌಕರ್ಯ ಕೊರತೆ ಶಾಲೆಯನ್ನೇ ಮುಚ್ಚುವ ಹಂತಕ್ಕೆ ಕೊಂಡೊಯ್ದಿರುವುದು ವಿಪರ್ಯಾಸ.

ಸ್ವಚ್ಛತೆ ಮರೀಚಿಕೆ

ಶಾಲಾ ಆವರಣದ ಗೋಡೆಗಳ ಬದಿಯಲ್ಲಿ ರಾಶಿ ರಾಶಿ ಕಸ ಬಿದ್ದಿದೆ. ಸ್ವಚ್ಛ ಮಾಡಬೇಕಾಕದ ಗ್ರಾಪಂ ಆಡಳಿತವೂ ಕಡೆಗಣಿಸಿದೆ. ಶಾಲೆ ಬಳಿ ಕಸಹಾಕಲು ಡಬ್ಬವನ್ನೂ ಇಟ್ಟಿಲ್ಲ. ಗೋಡೆ ಬದಿಯಲ್ಲೇ ಕಸ ಸುರಿಯಲಾಗುತ್ತಿದೆ. ಶಾಲಾ ಕಾಂಪೌಂಡ್ ಒಂದೆಡೆ ಒಡೆದಿದೆ. ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಸಹ ಹೊಣೆಯನ್ನು ಮರೆತಿರುವಂತೆ ಕಾಣುತ್ತಿದೆ. ಸರ್ಕಾರಿ ಶಾಲೆಯೊಂದು ಗ್ರಾಮಸ್ಥರು, ಅಕಾರಿಗಳು ಹಾಗೂ ಜನಪ್ರತಿನಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ನಲುಗುವಂತಾಗಿದೆ.

ಜನಪ್ರತಿನಿಗಳ ಜವಾಬ್ದಾರಿ

ಮುಚ್ಚಿ ಹೋಗುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕು ಎನ್ನುವ ಸರ್ಕಾರದ ಚಿಂತನೆಗೆ ಅರ್ಥ ಬರಬೇಕಾದಲ್ಲಿ ಮಕ್ಕಳು ಶಿಕ್ಷಣ ಕಲಿಯಲು ಉತ್ತಮ ವಾತಾವರಣ ಕಲ್ಪಿಸುವ ಅಗತ್ಯವಿದೆ. ಉತ್ತಮ ಶಿಕ್ಷಕರಿದ್ದು ಸುಸಜ್ಜಿತ ಕಟ್ಟಡ, ವಿದ್ಯುತ್, ನೀರು, ಶೌಚಗೃಹದ ವ್ಯವಸ್ಥೆ ಕಲ್ಪಿಸಬೇಕಿರುವುದು ಜನಪ್ರತಿನಿಗಳ ಜವಾಬ್ದಾರಿ.

ದೊಣಬಘಟ್ಟದ ಕನ್ನಡ ಶಾಲೆಯಲ್ಲಿ ಕೊಠಡಿಗಳು ಹಾಳಾಗಿರುವುದು ನನ್ನ ಗಮನಕ್ಕೆ ತಡವಾಗಿ ಬಂದಿದೆ. ಮುಂಚೆಯೇ ಗೊತ್ತಿದ್ದರೆ ವಿವೇಕಾ ಕೊಠಡಿ ಯೋಜನೆಯಡಿ 2 ಕೊಠಡಿಗಳನ್ನು ಮಂಜೂರು ಮಾಡಿಸುತ್ತಿದ್ದೆ. ಈಗಾಗಲೇ 2 ಕೊಠಡಿಗಳ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಮತ್ತೊಮ್ಮೆ ಶಾಲೆಗೆ ಭೇಟಿನೀಡಿ ವ್ಯವಸ್ಥೆ ಸರಿಪಡಿಸುತ್ತೇನೆ.

ಎ.ಕೆ.ನಾಗೇಂದ್ರಪ್ಪ

ಬಿಇಒ, ಭದ್ರಾವತಿ

ನನಗೆ ಶಾಲೆ ಅವ್ಯವಸ್ಥೆ ಕುರಿತು ಯಾವುದೇ ಮಾಹಿತಿ ಬಂದಿಲ್ಲ. ಕ್ಷೇತ್ರ ಶಿಕ್ಷಣಾಕಾರಿಗಳಿಂದ ಮಾಹಿತಿ ಪಡೆದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಬಳಿ ಮಾತನಾಡುತ್ತೇನೆ. ಅಗತ್ಯವಿರುವ ಎಲ್ಲ ಸೌಲಭ್ಯ ನೀಡಲು ತುರ್ತು ಕ್ರಮ ಕೈಗೊಳ್ಳುತ್ತೇನೆ. ಕನ್ನಡ ಶಾಲೆ ಉಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಬಿ.ಕೆ.ಸಂಗಮೇಶ್ವರ್

ಶಾಸಕ

ನಮ್ಮ ಇಬ್ಬರು ಮಕ್ಕಳು ಅದೇ ಶಾಲೆಯಲ್ಲಿ ಓದುತ್ತಿದ್ದಾರೆ. ಅಲ್ಲಿನ ಸಮಸ್ಯೆ ಕುರಿತು ಈಗಾಗಲೇ ಬಿಇಒ ಹಾಗೂ ಶಾಸಕರ ಬಳಿ ಮಾತನಾಡಿದ್ದೇನೆ. ಹೊಸ ಕಟ್ಟಡ ಕಟ್ಟುತ್ತೇವೆ ಎಂದು ಹೇಳುತ್ತಿದ್ದಾರೆ. ಯಾವುದೂ ಆಗಿಲ್ಲ. ನಾನೂ ಸಹ ಅದೇ ಶಾಲೆಯಲ್ಲಿ ಓದಿದ್ದೇನೆ. ನಮ್ಮ ಊರಿನ ಕನ್ನಡ ಶಾಲೆಯನ್ನು ಉಳಿಸಿಕೊಳ್ಳಬೇಕಿದೆ. ಈಗಾಗಲೆ ಮಕ್ಕಳ ಸಂಖ್ಯೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ 3 ಜನ ಶಿಕ್ಷಕರನ್ನು ಬೇರೆಡೆಗೆ ವಗಾವಣೆ ಮಾಡುತ್ತಿರುವ ಮಾಹಿತಿ ಇದೆ. ಅದಕ್ಕೆ ಅವಕಾಶ ಕೊಡುವುದಿಲ್ಲ. ಈ ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದಾರೆ.

ಅಬ್ಜಲ್

ಎಸ್‌ಡಿಎಂಸಿ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net