

ತ್ಯಾಮಗೊಂಡ್ಲು: ಸ್ಥಳೀಯ ಆಡಳಿತಗಳ ಸಹಕಾರದೊಂದಿಗೆ ಕೈಗಾರಿಕೆಗಳು ಬೆಳೆಯಬೇಕು. ಹಾಗೆಯೇ ಸ್ಥಳೀಯ ಸಂಸ್ಥೆಗಳು ಕೂಡ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಶ್ರೀನಿವಾಸ್ ಹೇಳಿದರು.
ಹೋಬಳಿಯ ಕೈಗಾರಿಕಾ ಪ್ರದೇಶದಲ್ಲಿರುವ ತ್ರಿವೇಣಿ ಇಂಜನಿಯರಿಂಗ್ ಕಂಪನಿಗೆ ಭೇಟಿ ನೀಡಿ ವಿವಿಧ ಕೈಗಾರಿಕೆಗಳ ಕುಂದುಕೊರತೆ ಬಗ್ಗೆ ಮನವಿ ಪರಿಶೀಲಿಸಿದರು. ನೆಲಮಂಗಲದಲ್ಲಿ ನಿರ್ಮಿಸಲುದ್ದೇಶಿಸಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಸಿಎಸ್‌ಆರ್ ನಿಧಿ ಒದಗಿಸುವ ಬಗ್ಗೆ ಚರ್ಚೆ ನಡೆಸಿದರು.
ಈ ಕೈಗಾರಿಕಾ ವಲಯದಲ್ಲಿ ನೀರಿನ ಕೊರತೆ ಇದೆ ಎಂದು ಮಾಹಿತಿ ಬಂದಿದೆ, ಪ್ರತ್ಯೇಕವಾಗಿ ಬೋರ್‌ವೆಲ್ ಕೊರೆಸಲು ಜಿಲ್ಲಾ ಆಡಳಿತ ಅನುಮತಿ ನೀಡುವಂತಿಲ್ಲ. ಕೊಳವೆಬಾವಿಗಳು ಹೆಚ್ಚಾದಲ್ಲಿ ಅಂತರ್ಜಲಮಟ್ಟ ಕುಸಿಯುತ್ತದೆ ಎಂಬ ಸಾರ್ವಜನಿಕ ಅರ್ಜಿ ಕೋರ್ಟ್‌ನಲ್ಲಿ ಬಾಕಿ ಇದೆ, ಈಗಾಗಲೇ ಎತ್ತಿನಹೊಳೆ ಯೋಜನೆಯಿಂದ ನೀರು ಹರಿಸಲು ಮುಖ್ಯ ಇಂಜಿನಿಯರ್ ಜತೆ ಚರ್ಚಿಸಲಾಗಿದೆ, ನೆಲಮಂಗಲದಲ್ಲಿ ನಿರ್ಮಿಸಲುದ್ದೇಶಿಸಿರುವ ಆಸ್ಪತ್ರೆಗೆ ಕಂಪನಿಗಳ ಸಾಮಾಜಿಕ ಜವಾಬ್ದಾರಿಯಡಿ ಹಣ ನೀಡಲು ಮನವಿ ಮಾಡಲಾಗಿದ್ದು, ಹೆಚ್ಚಿನ ಕಂಪನಿಗಳು ಸಕಾರಾತ್ಮಕವಾಗಿ ಸ್ಪಂದಿಸಿವೆ ಎಂದು ತಿಳಿಸಿದರು.
ಕೋರ್ಟ್ ಆದೇಶದಂತೆ ನೆಲಮಂಗಲ ತಾಲೂಕಿನಲ್ಲಿ 19 ದೇವಾಲಯಗಳ ತೆರವು ಕಾರ್ಯಾಚರಣೆ ಬಗ್ಗೆ ವಿಜಯವಾಣಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಹೈಕೋರ್ಟ್ ನಿಗಾದಲ್ಲಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ, ತೆರವು ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಆದೇಶವಿರುವುದರಿಂದ ಪ್ರತಿ ತಿಂಗಳು ಈ ಬಗ್ಗೆ ಜಿಲ್ಲಾಡಳಿತದಿಂದ ವರದಿ ನೀಡಬೇಕಾಗಿದೆ. ಸರ್ಕಾರಿ ಜಾಗದಲ್ಲಿರುವ ಅನಧಿಕೃತ ದೇವಾಲಯಗಳನ್ನಷ್ಟೇ ತೆರವು ನಡೆಸಲಾಗುತ್ತಿದೆ ಎಂದು ಹೇಳಿದರು.
ತ್ಯಾಮಗೊಂಡ್ಲು ಪಟ್ಟಣಕ್ಕೆ ಜಿಪಂ ಸಿಇಒ ರವಿಕುಮಾರ್ ಭೇಟಿ ನೀಡಿ, ಇಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ವರದಿ ತರಿಸಿಕೊಂಡಿದ್ದು, ಅಕ್ರಮವೆಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ದಾಬಸ್‌ಪೇಟೆ ಕೈಗಾರಿಕಾ ಸಂಘದ ಅಧ್ಯಕ್ಷ ಕಂಠಪ್ಪ ಮಾತನಾಡಿ, ಉತ್ತಮ ಆಸ್ಪತ್ರೆ ನಿರ್ಮಾಣ ಕಾರ್ಯದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.