ಸೌಂದರ್ಯಿಕರಣದತ್ತ ಧಾರವಾಡ

7 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ಜ. 12ರಿಂದ ರಾಷ್ಟ್ರೀಯ ಯುವ ಜನೋತ್ಸವ ನಡೆಸಲಾಗುವುದು ಎಂದು ಘೋಷಣೆ ಮಾಡುತ್ತಿದ್ದಂತೆ ನಗರ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ನೆಪದಲ್ಲದಾರೂ ನಗರ ತಕ್ಕ ಮಟ್ಟಿಗೆ ಸುಧಾರಣೆ ಕಂಡಿತಲ್ಲ ಎಂಬ ಸಮಾಧಾನ ಜನರಲ್ಲಿ ಮೂಡಿದೆ.
ಸಾರ್ವಜನಿಕರು ಇಷ್ಟು ದಿನಗಳ ಕಾಲ ಗೋಗರೆದು ರಸ್ತೆ ದುರಸ್ತಿಗೆ ಆಗ್ರಹಿಸುತ್ತಿದ್ದರೂ ಜನಪ್ರತಿನಿಧಿಗಳು ಕಿವಿಗೊಟ್ಟಿರಲಿಲ್ಲ. ಆದರೆ ಯುವ ಜನೋತ್ಸವದ ನೆಪದಲ್ಲಿ ತಾತ್ಕಾಲಿಕವಾಗಿಯಾದರೂ ರಸ್ತೆಗಳ ಸುಧಾರಣೆ ಆಗಿದ್ದರೆ, ವಿವಿಧ ಕಡೆಗಳಲ್ಲಿ ಗೋಡೆಗಳು ವೈವಿಧ್ಯಮಯ ಚಿತ್ರಕಲೆಗಳಿಂದ ಕಂಗೊಳಿಸುತ್ತಿವೆ.
ರಾಷ್ಟ್ರೀಯ ಯುವ ಜನೋತ್ಸವವನ್ನು ವಿಂಜೃಭಣೆಯಿಂದ ಆಚರಿಸುವ ನಿಟ್ಟಿನಲ್ಲಿ ನಗರದ ಪ್ರಮುಖ ಕಟ್ಟಡಗಳು, ಕಾಂಪೌಂಡ ಗೋಡೆಗಳ ಮೇಲೆ ವೈವಿಧ್ಯಮಯ ಚಿತ್ರಕಲೆಯನ್ನು 100 ಯುವ ಕಲಾವಿದರು 7 ತಂಡಗಳಾಗಿ ಚಿತ್ರಿಸಲು ಆರಂಭಿಸಿದ್ದಾರೆ.
7 ತಂಡಗ ಸದಸ್ಯರು ಕವಿವಿ ಆವರಣ, ಕೆಸಿಡಿ ಸುತ್ತ, ಸಪ್ತಾಪುರ ರಸ್ತೆಯುದ್ದಕ್ಕೂ ಇರುವ ಗೋಡೆಗಳ ಮೇಲೆ ವಿವಿಧ ರಿತಿಯ ಕಲಾತ್ಮಕ ಚಿತ್ರಗಳನ್ನು ಬಿಡಿಸುತ್ತಿದ್ದಾರೆ. ಕಲೆ, ಸಂಸ್ಕೃತಿ, ಇತಿಹಾಸ, ಪರಂಪರೆ, ಸೇನೆ, ಕ್ರೀಡೆ, ಕೃಷಿ, ಪರಿಸರ ಕುರಿತಾದ ಯುವಕರು, ಜನಸಾಮಾನ್ಯರನ್ನು ಪ್ರೇರೆಪಿಸಲು ಹಾಗೂ ಹಬ್ಬದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಚಿತ್ರಿಸಲಾಗುತ್ತಿದೆ.
ಯುವ ಜನೋತ್ಸವ ನಿಮಿತ್ತ ಶುಕ್ರವಾರದಿಂದ ಆರಂಭವಾಗಿರುವ ಚಿತ್ರ ಬಿಡಿಸುವ ಆಂದೋಲನ ಜ. 11ರವರೆಗೂ ನಡೆಯಲಿದೆ. ಭರತ ನಾಟ್ಯ ಯಕ್ಷಗಾನ, ಕಂಬಳ, ಆನೆಅಂಬಾರಿ, ಜನಪದ ನೃತ್ಯಗಳು, ಪುರಾತನ ಸ್ಮಾರಕಗಳು ಭಾರತೀಯ ನಾಯಕರ ಚಿತ್ರಗಳನ್ನು ಸಹ ಚಿತ್ರೀಕರಿಸುತ್ತಿರುವುದು ವಿಶೇಷವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net