

ಅರಕಲಗೂಡು: ಪಟ್ಟಣದ ಸರ್ಕಾರಿ ಆಸ್ಪತ್ರೆಯ ಐಸೋಲೇಷನ್ ಕೇಂದ್ರದ ಕಟ್ಟಡ ಕಾಮಗಾರಿಗೆ ಶಾಸಕ ಎ.ಟಿ.ರಾಮಸ್ವಾಮಿ ಶನಿವಾರ ಭೂಮಿ ಪೂಜೆ ನೆರೆವೇರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಾಂಕ್ರಾಮಿಕ ರೋಗಗಳಿಗೆ ತುತ್ತಾದ ರೋಗಿಗಳನ್ನು ಪ್ರತ್ಯೇಕ ವಾಸದಲ್ಲಿ ಇರಿಸುವ ಉದ್ದೇಶದಿಂದ 12 ಹಾಸಿಗೆಗಳ ಐಸೋಲೇಶನ್ ಕೇಂದ್ರವನ್ನು 30 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. 4 ತಿಂಗಳ ಅವಧಿಯಲ್ಲಿ ಕಟ್ಟಡ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಲಭ್ಯವಾಗಲಿದೆ ಎಂದರು.
ಇದೇ ವೇಳೆ ತಾಲ್ಲೂಕಿನ ಕೊಣನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ 6 ಹಾಸಿಗೆಗಳ ತುರ್ತುನಿಗಾ ಘಟಕ (ಐ ಸಿ ಯು) ನಿರ್ಮಿಸಲು 18 ಲಕ್ಷ ರೂ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನಡೆಸಲಾಗಿದೆ. ರಾಮನಾಥಪುರ ಕೊಣನೂರು ಮಧ್ಯೆ 23 ಲಕ್ಷ ರೂ ವೆಚ್ಚದ ಎಕ್ಸ್ ಪ್ರೆಸ್ ವಿದ್ಯುತ್ ಲೈನ್ ಅಳವಡಿಕೆಗೆ ಚಾಲನೆ ನೀಡಿದ್ದು ಕಾಮಗಾರಿ ಆರಂಭವಾಗಿದೆ, ಇದರಿಂದ ಈ ಎರಡೂ ಪಟ್ಟಣಗಳಿಗೆ ನಿರಂತರ ವಿದ್ಯುತ್ ಸೌಲಭ್ಯ ದೊರಕಲಿದೆ ಎಂದರು.
ಪಪಂ ಉಪಾಧ್ಯಕ್ಷೆ ಎಚ್.ಎಸ್. ರಶ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಯ್ಯ, ಸದಸ್ಯ ಅನಿಕೇತನ್, ತಾಲೂಕು ಆರೋಗ್ಯಾಧಿಕಾರಿ ಡಾ. ಪುಷ್ಪಲತಾ, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ ಸ್ವಾಮಿಗೌಡ, ಪಪಂ ಮುಖ್ಯಾಧಿಕಾರಿ ಶಿವಕುಮಾರ್, ವಕೀಲ ಶಂಕರಯ್ಯ, ಮುಖಂಡರಾದ ಹರೀಶ್, ಅಬ್ದುಲ್ ಅಲೀಂ, ಆಮ್ ಆದ್ಮಿ ಪಕ್ಷದ ಬಿ.ಟಿ. ಜವರೇಗೌಡ ಇದ್ದರು.