ಸೋಲು-ಗೆಲುವು ಮುಖ್ಯವಲ್ಲ: ಡಿಸಿ ಲತಾ ಹೇಳಿಕೆ

1
Published on

ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಸರ್ಕಾರಿ ನೌಕರರ ರಿಕ್ರಿಯೇಷ್‌ನ್ ಕ್ಲಬ್ ಮತ್ತು ಆಯಾ ತಾಲೂಕಿನಲ್ಲಿ ಸರ್ಕಾರಿ ನೌಕರರ ವಸತಿ ಗೃಹ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಭರವಸೆ ನೀಡಿದರು.

ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸಹಯೋಗದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಕೀಳರಿಮೆಯನ್ನು ಬಿಟ್ಟು ಉತ್ಸಾಹದಿಂದ ಭಾಗವಹಿಸಬೇಕು. ಇದು ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿ ಎಂದರು.

ಸರ್ಕಾರಿ ಸೇವೆಯಲ್ಲಿ ನಾನಾ ರೀತಿಯಲ್ಲಿ ಸಿಬ್ಬಂದಿ ಕೆಲಸದ ಒತ್ತಡಕ್ಕೆ ಸಿಲುಕುವಿಕೆಯು ಸಾಮಾನ್ಯ. ಇದರ ನಿವಾರಣೆಗೆ ಕ್ರೀಡಾಕೂಟಗಳಲ್ಲಿ ಭಾಗಿ ಸಹಕಾರಿಗಿದೆ. ಸರ್ಕಾರಿ ನೌಕರಿ ನಿರ್ವಹಣೆಯು ಪುಣ್ಯದ ಕೆಲಸ. ಇದಕ್ಕೆ ಪ್ರತಿಯೊಬ್ಬರು ಕೆಲಸದ ಬಗ್ಗೆ ವಿಶೇಷ ಅಭಿಮಾನ ಹೊಂದಿರಬೇಕು. ನಿವೃತ್ತಿಯಾಗುವವರೆಗೂ ಉತ್ತಮ ಸೇವೆ ಸಲ್ಲಿಸುವ ಮೂಲಕ ಒಳ್ಳೆಯ ಹೆಸರು ಗಳಿಸಬೇಕು ಎಂದರು.

ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಈ ಭಾಗದಲ್ಲಿ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿದ ಅನೇಕ ಪ್ರತಿಭಾವಂತರು ಇದ್ದಾರೆ. ಹಾಗೆಯೇ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕು. ಮುಂಬರುವ ದಿನಗಳಲ್ಲೂ ಅಂತಾರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಗಮನರ್ಹ ಸಾಧನೆ ತೋರಬೇಕು ಎಂದು ತಿಳಿಸಿದರು. ಒಳ್ಳೆಯ ಕೆಲಸವು ಸದಾ ಖುಷಿ ನೀಡಿದರೆ, ಮೋಸದ ಕೆಲಸ ಇರುವ ಖುಷಿಯನ್ನು ಕಸಿದುಕೊಳ್ಳುತ್ತದೆ. ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಹೇಳಿಕೆಯಂತೆ ಸರ್ಕಾರಿ ಕೆಲಸವು ದೇವರ ಕೆಲಸ. ಇದನ್ನು ಅರ್ಥ ಮಾಡಿಕೊಂಡು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವವರಿಗೆ ಆತ್ಮಸಂತೃಪ್ತಿ ಸಿಗುತ್ತದೆ ಎಂದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಹರೀಶ್ ಮಾತನಾಡಿ, ಸಾಕಷ್ಟು ಹುದ್ದೆಗಳು ಖಾಲಿಯಿದ್ದರೂ ಸರ್ಕಾರಿ ನೌಕರರು ಯಾವುದೇ ಲೋಪವಾಗದಂತೆ ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಂಕ್ರಾಮಿಕ ಅವಧಿಯಲ್ಲಿಯೂ ಎದೆಗುಂದಲಿಲ್ಲ. ಇನ್ನು ಜಿಲ್ಲೆಯು ಸಕಾಲ ಮತ್ತು ನರೇಗಾ ಸೇರಿ ನಾನಾ ಯೋಜನೆಗಳ ಅನುಷ್ಠಾನದಲ್ಲಿ ಉತ್ತಮ ಸಾಧನೆಗೈಯುವಲ್ಲಿ ನೌಕರರ ಪಾತ್ರ ಅಪಾರವಾದುದು ಎಂದರು.

ಈಗ ಸರ್ಕಾರಿ ನೌಕರರ ಸಂಘವು ಶತಮಾನದ ಹೊಸ್ತಿಲಲ್ಲಿದ್ದು ಅನೇಕ ಸಾಧನೆಗಳನ್ನು ತೋರುತ್ತಿದೆ. ಕೇಂದ್ರ ಸರ್ಕಾರಿ ನೌಕರರಿಗೆ ಸರಿಸಮನಾದ ವೇತನ ಸೌಲಭ್ಯವು ರಾಜ್ಯ ಸರ್ಕಾರಿ ನೌಕರರಿಗೂ ಸಿಗುವಂತಾಗಲು ಹೋರಾಟ ನಡೆಸಲಾಗುತ್ತಿದೆ. ನಗದು ರಹಿತ ಉಚಿತ ಚಿಕಿತ್ಸೆ, ಎನ್‌ಪಿಎಸ್ ರದ್ದು ಅಗತ್ಯತೆ ವಿಚಾರದಲ್ಲಿ ಸಂಘ ಬದ್ಧತೆಯನ್ನು ಸಡಿಲಗೊಳಿಸಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಉಪವಿಭಾಗಧಿಕಾರಿ ಸಂತೋ?್ ಕುಮಾರ್, ತಹಸೀಲ್ದಾರ್ ಗಣಪತಿಶಾಸ್ತ್ರಿ ಮತ್ತಿತರರು ಇದ್ದರು.

ಉತ್ಸಾಹದಲ್ಲಿ ನೌಕರರ ಭಾಗಿ: ಜಿಲ್ಲೆಯ 6 ತಾಲೂಕುಗಳಿಂದಲೂ ಹಿರಿಯರು, ಕಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ಎನ್ನದೇ ಸರ್ಕಾರಿ ನೌಕರರು ವಿವಿಧ ಸ್ಪರ್ಧೆಗಳಲ್ಲಿ ಉತ್ಸಾಹದಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದರು. ಇದೇ ವೇಳೆ ಸ್ವತಃ ಜಿಲ್ಲಾಧಿಕಾರಿಗಳು ಕ್ರಿಕೆಟ್ ಬ್ಯಾಟ್ ಹಿಡಿದು ಆಟ ಆಡುವ ಮೂಲಕ ಕ್ರೀಡಾಪಟುಗಳಿಗೆ ಸ್ಫೂರ್ತಿ ತುಂಬಿದರು. ಜಿಲ್ಲೆಯಿಂದ ರಾಜ್ಯ ಮಟ್ಟ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿರುವ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ರಾಷ್ಟ್ರಮಟ್ಟದ ಫುಟ್ಬಾಲ್ ಕ್ರೀಡೆಯಲ್ಲಿ ಭಾಗವಹಿಸಿದ್ದ ಜಿಲ್ಲೆಯ ಕ್ರೀಡಾಪಟುಗಳಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ರೀಡಾ ಜ್ಯೋತಿ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net