ಸೋಲಿನಿಂದ ಧೃತಿಗೆಡುವ ಸಂದರ್ಭವೇ ಇಲ್ಲ

CTD 4 B.N.CHANDRAPPA--0003
Published on

ಚಿತ್ರದುರ್ಗ: ಕಾಂಗ್ರೆಸ್ ಉತ್ತಮ ಆಡಳಿತ ನೀಡಿದ್ದರೂ ಸೋಲು, ಮತ್ತೊಂದು ಕಡೆ ಸುಳ್ಳನ್ನೇ ಸತ್ಯ ಎಂದು ಬಿಂಬಿಸುವ ವರ್ಗಕ್ಕೆ ಜಯವಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ತಮ್ಮ ಸೋಲನ್ನು ವಿಮರ್ಶಿಸಿದ್ದಾರೆ.
ಫಲಿತಾಂಶ ಪ್ರಕಟ ಬಳಿಕ ಹೇಳಿಕೆ ನೀಡಿರುವ ಅವರು, ಜನರ ತೀರ್ಪಿಗೆ ತಲೆಬಾಗುವೆ. 2019ರ ಚುನಾವಣೆ ಸೋಲಿನ ಬಳಿಕ ಕ್ಷೇತ್ರದ ಜನರು, ಕಾರ‌್ಯಕರ್ತರೊಂದಿಗೆ ಇದ್ದೆ. ಚಿತ್ರದುರ್ಗ ಕರ್ಮಭೂಮಿ ಭಾವಿಸಿ ಕ್ಷೇತ್ರದಾದ್ಯಂತ ಓಡಾಡಿದೆ. ಜನರು ಕೂಡ ಪ್ರೀತಿ ತೋರಿದ್ದರು. ಆದರೆ, ಅವರ ಪ್ರೀತಿ-ಅಭಿಮಾನ ಗೆಲುವಾಗಿ ಪರಿವರ್ತನೆ ಆಗಿಲ್ಲವೆಂಬ ನೋವು ಕಾಡಿದೆ, ಆದರೂ ನಾನು ಧೃತಿಗೆಡುವುದಿಲ್ಲ. ಮತಹಾಕಿರುವ ಆರು ಲಕ್ಷಕ್ಕೂ ಅಧಿಕ ಜನರಿಗೆ ಋಣಿ ಆಗಿರುವೆ ಎಂದಿದ್ದಾರೆ.
ಸಮೀಕ್ಷೆಗಳನ್ನು ಸುಳ್ಳಾಗಿಸಿ ದೇಶದಲ್ಲಿ ಇಂಡಿಯಾ ಒಕ್ಕೂಟ ಹೆಚ್ಚು ಸ್ಥಾನ ಪಡೆದಿದ್ದು, ಅಧಿಕಾರದ ಹೊಸ್ತಿಲಿನಲ್ಲಿದೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದ್ದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುವೆ. ಭದ್ರಾ ಮೇಲ್ದಂಡೆ, ನೇರ ರೈಲು ಮಾರ್ಗ, ಸರ್ಕಾರಿ ಮೆಡಿಕಲ್ ಕಾಲೇಜು ಹೀಗೆ ಅನೇಕ ಯೋಜನೆಗಳು ನನ್ನ ಹಿಂದಿನ ಅಧಿಕಾರಾವಧಿಯಲ್ಲಿ ವೇಗ ಪಡೆದಿದ್ದು, ಈ ಬಾರಿ ಸಂಸದನಾಗಿ ಪೂರ್ಣಗೊಳಿಸುವ ಮಹಾದಾಸೆ ಇತ್ತು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಜತೆಗೂಡಿ ಕೇಂದ್ರದ ಮೇಲೆ ಒತ್ತಡ ತಂದು ಯೋಜನೆಗಳನ್ನು ತರಲು ಪ್ರಯತ್ನಿಸುವೆ. ಸೋಲಿನ ಕಾರಣ ಮುಂದಿಟ್ಟುಕೊಂಡು ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಿಲ್ಲ ಎಂದಿದ್ದಾರೆ.
ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ, ಜನಪರ ಕಾರ್ಯಗಳನ್ನು ನೀಡಿದೆ. ಗ್ಯಾರಂಟಿಗಳು ಜನರ ಮನಸ್ಸನ್ನು ಗೆದ್ದಿದ್ದು, ಕೋಟ್ಯಂತರ ಜನರು ಫಲಾನುಭವಿ ಆಗಿದ್ದಾರೆ. ಎಲ್ಲಿ ಲೋಪವಾಗಿದೆ ಎಂಬದನ್ನು ವಿಮರ್ಶಿಸಬೇಕಾಗಿದೆ ಎಂದಿದ್ದಾರೆ.
ಕಾರ್ಯಕರ್ತರು, ಶಾಸಕರು, ಸಚಿವರು, ಮುಖಂಡರು ಸಾಕಷ್ಟು ಶ್ರಮಿಸಿದ್ದಾರೆ. ಅವರೆಲ್ಲರಿಗೂ ನೋವು ಆಗಿರುವುದು ಸಹಜ. ಜನರಿಗೆ ಒಳಿತು ಮಾಡುವ ಮೂಲಕ ಕಹಿ ಘಟನೆ ಮರೆಯಬೇಕಿದೆ ಎಂದು ಚಂದ್ರಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net