

ಜಡಿಗೇನಹಳ್ಳಿ: ಮರು ಚುನಾವಣೆಯಲ್ಲಿ ಸೋತಿದ್ದರೂ ನಾನು ಎಂದಿಗೂ ಸೋತೆನೆಂದು ಕುಗ್ಗಿಲ್ಲ. ಹಾಗೆಯೇ ಅಭಿವೃದ್ಧಿ ಕೆಲಸ ನಿಲ್ಲಿಸಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿ ತವಟಹಳ್ಳಿ ಗ್ರಾಮದಲ್ಲಿ ಬುಧವಾರ ಸಿಮೆಂಟ್ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಈ ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ನಿರೀಕ್ಷಿತ ಅನುದಾನ ನೀಡಲಿಲ್ಲವೆಂಬ ಕಾರಣಕ್ಕೆ ಬೇಸತ್ತು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೆ. ಪ್ರಸ್ತುತ ಬಿಜೆಪಿ ಸರ್ಕಾರ ವಿಧಾನ ಪರಿಷತ್ ಸದಸ್ಯನಾಗಿ ಸಚಿವನಾಗಿದ್ದು, ನನ್ನ ವಿಶೇಷ ಅನುದಾನದಡಿ ಹೊಸಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರವಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದರು.
ತವಟಹಳ್ಳಿ,ಅತ್ತಿವಟ್ಟ ಮತ್ತು ತವಟಹಳ್ಳಿದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಯಿತು.
280 ಹಳ್ಳಿಗಳಲ್ಲೂ ಅಭಿವೃದ್ಧಿ: ಈ ಕ್ಷೇತ್ರಕ್ಕೆ ನಾನು ಶಾಸಕನಾಗಿ ಕಾಲಿಡುವ ಮುನ್ನ ಇಲ್ಲಿನ ಪರಿಸ್ಥಿತಿ ಹೇಗಿತ್ತು ಎಂಬುದು ಇಲ್ಲಿನ ಜನರಿಗೆ ಗೊತ್ತಿದೆ, ದೌರ್ಜನ್ಯ, ಅಕ್ರಮಗಳ ನಡುವೆ ಸಿಲುಕಿ ಜನರು ಹೈರಾಣಾಗಿದ್ದರು, ನಾನು ಶಾಸಕನಾಗಿ ಆಯ್ಕೆಯಾದ ಬಳಿಕ ಕ್ಷೇತ್ರದಲ್ಲಿ ಇವೆಲ್ಲಕ್ಕೂ ಮುಕ್ತಿ ನೀಡಿದ್ದೇನೆ. ಇಂದು ಕ್ಷೇತ್ರದಲ್ಲಿ ಶಾಂತಿ ನೆಲೆಸಲು ಸಾಕಷ್ಟು ಶ್ರಮಪಟ್ಟಿದ್ದೇನೆ ಎಂದು ಎಂಟಿಬಿ ತಿಳಿಸಿದರು.
100 ಕೋಟಿಗೂ ಹೆಚ್ಚಿನ ಅಭಿವೃದ್ಧಿ: ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೆ ಸರ್ಕಾರವಿದೆ. ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ತರಲು ನಿರಂತರ ಪ್ರಯತ್ನ ನಡೆಯುತ್ತಲೆ ಇರುತ್ತದೆ, ಮುಂದಿನ ದಿನಗಳಲ್ಲಿ ಸುಮಾರು 100 ಕೋಟಿ ರೂ.ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಿಯಾಯೋಜನೆ ಸಿದ್ಧವಾಗಿದೆ ಎಂದು ಎಂಟಿಬಿ ಹೇಳಿದರು.
ಈಶ್ವರಪ್ಪ ಹೆವಿ ಸ್ಪೀಡ್: ಸಚಿವ ಈಶ್ವರಪ್ಪ ಅವರು ಯಾವಾಗಲೂ ಹೆವಿಸ್ಪೀಡ್, ಮಾತನಾಡುವ ಭರದಲ್ಲಿ ಏನನ್ನೋ ಮಾತನಾಡಿದ್ದಾರೆ, ಆದರೆ ಅವರ ಮಾತಿನ ಹಿಂದೆ ಯಾವುದೇ ದುರುದ್ದೇಶವಿಲ್ಲ ಎಂದು ಸಚಿವ ಎಂಟಿಬಿ ನಾಗರಾಜ್ ರಾಷ್ಟ್ರಧ್ವಜ ಸಂಬಂಧ ಈಶ್ವರಪ್ಪ ವಿರುದ್ಧ ಎದ್ದಿರುವ ವಿವಾದದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ರಾಷ್ಟ್ರಧ್ವಜದ ಬಗ್ಗೆ ಎಲ್ಲರಿಗೂ ಗೌರವಿದೆ, ಉದ್ದೇಶಪೂರ್ವಕವಾಗಿ ಆ ಅರ್ಥದಲ್ಲಿ ಈಶ್ವರಪ್ಪ ಮಾತನಾಡಿಲ್ಲ, ಈ ಬಗ್ಗೆ ವಿನಾಕಾರಣ ವಿವಾದ ಸೃಷ್ಟಿಸುವುದು ತರವಲ್ಲ ಎಂದು ಸಮರ್ಥನೆ ನೀಡಿದರು.