

ದಾವಣಗೆರೆ : ದಾವಣಗೆರೆ ಲೋಕಸಭಾ ಕ್ಷೇತ್ರದ ಸೋಲಿನಿಂದ ಎದೆಗುಂದದೆ ಪಕ್ಷವನ್ನು ಮತ್ತೆ ಗಟ್ಟಿಗೊಳಿಸಿ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಗೆಲ್ಲಲು, ನಗರದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವ ಸಮಾರಂಭದಲ್ಲಿ ಸಂಕಲ್ಪ ಮಾಡಲಾಯಿತು.
ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಹಾಗೂ ಮುಖಂಡರು ಸೋಲಿನ ಕುರಿತು ಆತ್ಮಾವಲೋಕನ ಮಾಡಿಕೊಂಡರು.
ಹರಿಹರ ಶಾಸಕ ಬಿ.ಪಿ. ಹರೀಶ್, ಚುನಾವಣೆಗಿಂತ ಮೊದಲು ಪಕ್ಷದೊಳಗೆ ನಡೆದ ಬೆಳವಣಿಗೆಗಳು, ನಂತರದ ವಿದ್ಯಮಾನಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟರು. ಎಲ್ಲಿ ಎಡವಿದ್ದೇವೆ, ತೆರೆ ಮರೆಯಲ್ಲಿ ಏನೆಲ್ಲ ನಡೆದಿದೆ ಎಂಬುದನ್ನು ಕಾರ್ಯಕರ್ತರ ಮುಂದೆ ತೆರೆದಿಟ್ಟರು. ಸತ್ಯ ಎಲ್ಲರಿಗೂ ಗೊತ್ತಾಗಬೇಕು ಎನ್ನುತ್ತ ಮುಕ್ತವಾಗಿ ಮಾತನಾಡಿದರು.
ಜಿಎಂ ಮನೆತನದವರು ಹೊರಗಿನವರಲ್ಲ ಎಂದು ಮಾತು ಆರಂಭಿಸಿ, ಜಿ. ಮಲ್ಲಿಕಾರ್ಜುನಪ್ಪ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಿದಾಗ ಭೀಮಸಮುದ್ರ ದಾವಣಗೆರೆ ಲೋಕಸಭಾ ವ್ಯಾಪ್ತಿಯಲ್ಲೇ ಇತ್ತು. ಮಲ್ಲಿಕಾರ್ಜುನಪ್ಪ ಅವರ ಆಶೀರ್ವಾದದಿಂದಲೇ ಜಿಲ್ಲೆಯ ಅನೇಕರು ಶಾಸಕರಾದರು. ಅವರು ಜಿಲ್ಲೆಯಲ್ಲಿ ಬಿಜೆಪಿಗೆ ತಳಹದಿ ಹಾಕಿಕೊಟ್ಟರು ಎಂದು ತಿಳಿಸುವ ಮೂಲಕ ಅಪಸ್ವರ ಎತ್ತಿದವರಿಗೆ ಉತ್ತರ ಕೊಟ್ಟರು.
ಪಕ್ಷಕ್ಕೆ ದ್ರೋಹ ಎಸಗಿದವರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು, ಅವರ ಬದಲು ಹೊಸ ನಾಯಕರನ್ನು ಬೆಳೆಸೋಣ ಎಂದರು. ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಗೆದ್ದು ತೋರಿಸೋಣ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಜೆಡಿಎಸ್‌ನ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಮೋದಿ ಅಲೆಯ ನಡುವೆ ಗೆದ್ದೇ ಗೆಲ್ಲುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸದ ನಡುವೆ ಒಳಗಿನ ಮೋಸ ಗೊತ್ತಾಗದೆ ಸೋಲಿಗೆ ಕಾರಣವಾಯಿತು ಎಂದು ವಿಶ್ಲೇಷಿಸಿದರು.
ಕಾಂಗ್ರೆಸ್‌ನವರಿಂದ ಬಿಜೆಪಿ ಸೋತಿಲ್ಲ, ಬಿಜೆಪಿಯಲ್ಲಿನ ಕೆಲವರಿಂದಲೇ ಸೋಲಬೇಕಾಯಿತು. ಬಿಜೆಪಿಯೊಳಗೆ ಮುಸುಕಿನ ಗುದ್ದಾಟವಿತ್ತು. ವಿಧಾನಸಭೆ ಚುನಾವಣೆಯಿಂದ ಆರಂಭವಾಗಿ ಲೋಕಸಭೆ ಚುನಾವಣೆಯಲ್ಲಿ ಅದು ಅಂತ್ಯವಾಯಿತು, ಎತ್ತು ಏರಿಗೆ, ಕೋಣ ಕೆರೆಗೆ ಎಂಬಂತಾಗಿತ್ತು. ಗುಂಪುಗಾರಿಕೆಯಿಂದ ಹಾನಿಯಾಯಿತು ಎಂದರು.
ನಾಲ್ಕು ಬಾರಿ ಸಂಸದರಾಗಿದ್ದ ಸಿದ್ದೇಶ್ವರ 5ನೇ ಬಾರಿ ಏಕೆ ಸ್ಪರ್ಧಿಸಲಿಲ್ಲ?. ನಿಲ್ಲುವುದಿಲ್ಲ ಎಂದು ಹೇಳಿದ್ದರಿಂದಲೇ ‘ಪ್ರಬಲ ಆಕಾಂಕ್ಷಿಗಳು’ ನಾಯಿಕೊಡೆಗಳಂತೆ ಹುಟ್ಟಿಕೊಂಡರು. ಬಿಜೆಪಿಯಲ್ಲಿ ಸಂಸತ್ ಚುನಾವಣೆ ಎದುರಿಸುವ ತಾಕತ್ತು ಇರುವವರು ಯಾರಿದ್ದಾರೆ? ಮುಂದಿನ ದಿನಗಳಲ್ಲಿ ಸಿದ್ದೇಶ್ವರ ಅವರೇ ಕಾಯಂ ಅಭ್ಯರ್ಥಿಯಾಗಲಿ. ಒಂದು ವೇಳೆ ಅವಕಾಶ ದೊರೆತರೆ ನಾನೂ ಸಿದ್ಧ ಎಂದು ಹೇಳಿದರು.
ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಚಿದಾನಂದಪ್ಪ, ಜಿ.ಎಸ್. ಅನಿತ್ ಕುಮಾರ್, ಪಾಲಿಕೆಯ ಉಪ ಮೇಯರ್ ಯಶೋದಾ, ಪ್ರತಿಪಕ್ಷ ನಾಯಕ ಪ್ರಸನ್ನ ಕುಮಾರ್, ಸದಸ್ಯರಾದ ಎಸ್.ಟಿ. ವೀರೇಶ್, ಉಮಾ ಪ್ರಕಾಶ್, ಮುಖಂಡರಾದ ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್, ದೇವರಮನಿ ಶಿವಕುಮಾರ್, ಚಂದ್ರಶೇಖರ್ ಪೂಜಾರ್, ಬಿ.ಎಸ್. ಜಗದೀಶ್ ಇದ್ದರು.