ಸೋಲಿಗರ ಸಮಸ್ಯೆಗಳ ಪರಿಹಾರಕ್ಕೆ ಪಾದಯಾತ್ರೆ

17 yelandur 01
Published on

ಯಳಂದೂರು: ಬುಡಕಟ್ಟು ಜನಾಂಗ ಇಂದಿಗೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಬಗ್ಗೆ ಸರ್ಕಾರ ವಿಶೇಷ ಕಾಳಜಿ ವಹಿಸುವಂತೆ ಆಗ್ರಹಿಸಿ ಮುಂದಿನ ದಿನಗಳಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್‌ಕುಮಾರ್‌ಶೆಟ್ಟಿ ತಿಳಿಸಿದರು.


ತಾಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ಬುಧವಾರ ಭೇಟಿ ನೀಡಿ ಸೋಲಿಗರ ಸಮಸ್ಯೆ ಆಲಿಸಿ ಮಾತನಾಡಿ, ಸೋಲಿಗರು ಅನಾದಿಕಾಲದಿಂದಲೂ ಕಾಡಿನಲ್ಲಿ ವಾಸವಿದ್ದಾರೆ. ಇವರು ಕನ್ನಡ ಭಾಷೆ, ಸಂಸ್ಕೃತಿಯ ನಿಜವಾದ ಆರಾಧಕರು ಹಾಗೂ ಪ್ರತಿಪಾದಕರಾಗಿದ್ದಾರೆ. ಆದರೆ ಇವರು ಇಂದಿಗೂ ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರ ಹಿಂದುಳಿದಿದ್ದಾರೆ. ಅಲ್ಲದೆ ಮೂಲಸೌಲಭ್ಯಗಳೂ ಸರಿಯಾಗಿ ಲಭಿಸುತ್ತಿಲ್ಲ. ಈ ಬಗ್ಗೆ ಧ್ವನಿ ಎತ್ತಲು ಹೋರಾಟದ ಅವಶ್ಯಕತೆ ಇದೆ ಎಂದರು.


ಚಾಮರಾಜನಗರ ಜಿಲ್ಲೆ ಗಡಿ ಜಿಲ್ಲೆಯಾದರೂ ಇಲ್ಲಿ ಅತ್ಯಂತ ಹೆಚ್ಚು ಕನ್ನಡ ಭಾಷೆ ಮಾತನಾಡುವ ಜನರಿದ್ದಾರೆ. ಇಲ್ಲಿನ ಜನಪದ ವಿಶ್ವವಿಖ್ಯಾತವಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ನಮ್ಮ ಬಣವನ್ನು ಇನ್ನಷ್ಟು ಪ್ರಬಲವಾಗಿಸುವ ಮೂಲಕ ಇಲ್ಲಿ ನಾಡುನುಡಿ ಕಟ್ಟುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.

ನಿಕಟಪೂರ್ವ ಅಧ್ಯಕ್ಷ ರಮೇಶ್, ಕರವೇ ರಾಜ್ಯ ಉಪಾಧ್ಯಕ್ಷ ಮಂಜೇಶ್, ಶಿವರಾಜ್‌ಗೌಡ, ಕಾರ್ಯದರ್ಶಿ ಎಂ.ಲೋಕೇಶ್, ಜಿಲ್ಲಾಧ್ಯಕ್ಷ ಆರ್. ಮೋಹನ್, ಉಪಾಧ್ಯಕ್ಷ ನಾಗೇಂದ್ರನಾಯಕ್, ಪ್ರಧಾನ ಕಾರ್ಯದರ್ಶಿ ರಿಯಾಜ್‌ಪಾಷ, ಉಮ್ಮತ್ತೂರು ಚಂದ್ರು ತಾಲೂಕು ಅಧ್ಯಕ್ಷ ವೈ.ಕೆ.ಮೋಳೆ ನಾಗರಾಜು, ಚಾಮಲಾಪುರ ವಿಜಯ್, ಜೆ.ಶ್ರೀನಿವಾಸ್, ಭೀಮಪ್ಪ, ವೈ.ವಿ. ಉಮಾಶಂಕರ್, ವೆಂಕಟೇಶ್, ಬೇದೇಗೌಡ, ರವಿಗೌಡಹಳ್ಳಿ, ಹರೀಶ್‌ಬಾಬು, ಸ್ವಾಮಿ, ಸೋಮಣ್ಣ, ರಂಗಸ್ವಾಮಿ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net