

ಹುಕ್ಕೇರಿ, ಬೆಳಗಾವಿ: ತಾಲೂಕಿನ ವಿದ್ಯುತ್ ಗ್ರಾಹಕರು ಹಾಗೂ ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸುವ ನಿಟ್ಟಿನಲ್ಲಿ ಸಚಿವ ಉಮೇಶ ಕತ್ತಿ ಅವರು 400 ಕೆ.ವಿ. ವಿದ್ಯುತ್ ಸ್ವೀಕೃತಿ ಕೇಂದ್ರ ಸ್ಥಾಪಿಸಲು ಇಂಧನ ಇಲಾಖೆಯೊಂದಿಗೆ ಚರ್ಚಿಸಿದ್ದು, ಅದು ಪರಿಶೀಲನಾ ಹಂತದಲ್ಲಿದೆ ಎಂದು ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ರಮೇಶ ಕತ್ತಿ ತಿಳಿಸಿದರು.
ಇಲ್ಲಿನ ವಿದ್ಯುತ್ ಸಹಕಾರಿ ಸಂಘದ 53ನೇ ವಾರ್ಷಿಕ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಪ್ರಾರಂಭವಾದಲ್ಲಿ ತಾಲೂಕಿನಾದ್ಯಂತ ಕೊರತೆಯಾಗದಂತೆ ವಿದ್ಯುತ್ ಪೂರೈಸಲು ಸಾಧ್ಯವಾಗುತ್ತದೆ ಎಂದರು.
ಸೋಲಾರ್ ಪಾರ್ಕ್ (ಸೌರ ವಿದ್ಯುತ್ ಘಟಕ) ಪ್ರಾರಂಭಿಸಿ ಅಲ್ಲಿ ಉತ್ಪಾದನೆಯಾಗುವ ವಿದ್ಯುತ್‌ನ್ನು ನಮ್ಮ ವಿದ್ಯುತ್ ಸಹಕಾರಿ ಸಂಘಕ್ಕೆ ಪಡೆದು, ಸಂಘದ ಗ್ರಾಹಕರಿಗೆ ಯಾವ ಅಡೆತಡೆ ಇಲ್ಲದೆ ಗುಣಮಟ್ಟದ ವಿದ್ಯುತ್ ಪೂರೈಸಲು ಸಹ ಚಿಂತನೆ ಮಾಡಲಾಗಿದೆ. ಸೋಲಾರ್ ಪಾರ್ಕ್ ಪ್ರಾರಂಭಿಸಲು ಬೇಕಿರುವ 400 ಎಕರೆ ಜಮೀನು ಖರೀದಿಸಲು ಹುಡುಕಾಟ ನಡೆಸಲಾಗುತ್ತಿದೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ಕೆ.ಎಲ್.ಶ್ರೀನಿವಾಸ ಅವರು ವರದಿ ಓದಿ, ಪ್ರಸಕ್ತ ವರ್ಷ 186.20 ಕೋಟಿ ರೂ. ಮೊತ್ತದ ವಿದ್ಯುತ್ ಖರೀದಿಸಿ 184.03 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ. ವಿದ್ಯುತ್ ಪೂರೈಕೆ, ರಿಪೇರಿ ಮತ್ತು ಉಸ್ತುವಾರಿಗೆ 10.91 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.
ಸಚಿವ ಉಮೇಶ ಕತ್ತಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಕಲಗೌಡ ಪಾಟೀಲ, ಉಪಾಧ್ಯಕ್ಷ ವಿಷ್ಣು ರೇಡೇಕರ, ಶಶಿರಾಜ ಪಾಟೀಲ, ಕೆ.ಕೆ.ಬೆಣಚನಮರಡಿ, ಕುನಾಲಗೌಡ ಪಾಟೀಲ, ರಮೇಶ ಕುಲಕರ್ಣಿ, ಬಸಗೌಡ ಮಗ್ಗೆಣ್ಣವರ, ರವೀಂದ್ರ ಹಿಡಕಲ್, ರವೀಂದ್ರ ಅಸೂದೆ, ಬಿ.ಸಿ.ಪಟೋಳಿ, ಐ.ಆರ್.ಬಂಜಿರಾಮ, ಸಂಗೀತಾ ದಪ್ಪಾಧೂಳಿ, ಶಿವಲೀಲಾ ಮಣಗುತ್ತಿ, ಸ್ಥಾನಿಕ ಅಭಿಯಂತ ನೇಮಿನಾಥ ಖೇಮಲಾಪೂರೆ, ನಿರ್ದೇಶಕ ಅಶೋಕ ಚಂದಪ್ಪಗೋಳ, ವ್ಯವಸ್ಥಾಪಕ ಡಿ.ಎಸ್.ನಾಯಿಕ, ಅಕೌಂಟ್ಸ್ ಅಧಿಕಾರಿ ಎಸ್.ಎನ್.ಹಿರೇಮಠ, ಎಸ್.ಆರ್.ಮಲಗೌಡನವರ ಇತರರಿದ್ದರು.