ಚಾಮರಾಜನಗರ: 2025-26ನೇ ಸಾಲಿನ ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ರೈತರಿಗೆ ಸೌರಶಕ್ತಿ ಆಧಾರಿತ ಕೃಷಿ ಪಂಪ್ ಸೆಟ್‌ಗಳನ್ನು ಅಳವಡಿಸಿಕೊಳ್ಳಲು ನೀಡಲಾಗುವ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ಎಲ್ಲಾ ವರ್ಗದ ರೈತರಿಗೂ ಶೇ.50ರ ಸಹಾಯಧನ ನಿಗದಿಪಡಿಸಲಾದೆ. ತೋಟಗಾರಿಕೆಯಲ್ಲಿ ವಿನೂತನ ತಂತ್ರಜ್ಞಾನ ಮತ್ತು ಯಂತ್ರೋಪಕರಣಗಳಿಗೆ ಸಹಾಯಧನ ಕಾರ್ಯಕ್ರಮದಡಿ ತೋಟಗಾರಿಕೆ ಬೆಳೆಗಳ ಗುಣಮಟ್ಟದ ಉತ್ಪಾದನೆಗೆ ವಿಶೇಷ ಉತ್ತೇಜನ ನೀಡಲು ಸಹಾಯಧನ ನೀಡಲಾಗುತ್ತದೆ. ಕನಿಷ್ಠ 3 ಹೆಚ್.ಪಿ ಸೋಲಾರ್ ಪಂಪ್ ಸೆಟ್ ಸಾಮರ್ಥ್ಯದ ಘಟಕ ವೆಚ್ಚ 2 ಲಕ್ಷ ರೂ. ಗಳಿಗೆ ಶೇ.50 ರಂತೆ 1 ಲಕ್ಷ ರೂ., 5 ಹೆಚ್.ಪಿ ಹಾಗೂ ಮೇಲ್ಪಟ್ಟ ಸೋಲಾರ್ ಪಂಪ್‌ಸೆಟ್‌ಗಳಿಗೆ ಘಟಕ ವೆಚ್ಚ 3 ಲಕ್ಷ ರೂ. ಗಳಿಗೆ ಶೇ.50 ರಂತೆ 1.50 ಲಕ್ಷ ರೂ.ಗಳ ಗರಿಷ್ಠ ಸಹಾಯಧನ ನೀಡಲಾಗುವುದು.
ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್‌ಗಳನ್ನು ತೋಟಗಳಲ್ಲಿ ನಿರ್ಮಿಸಿರುವ ನೀರು ಸಂಗ್ರಹಣಾ ಘಟಕ ಅಥವಾ ಕೊಳವೆ ಬಾವಿಗಳಿಗೆ ಅಳವಡಿಸಬಹುದಾಗಿದ್ದು, ನೀರು ಸಂಗ್ರಹಣಾ ಘಟಕಕ್ಕೆ ಅಳವಡಿಸಿದ ರೈತರಿಗೆ ಆದ್ಯತೆ ನೀಡಲಾಗುವುದು. ರೈತರಿಗೆ ಸಹಾಯಧನ ಪಾವತಿಸುವ ಮುನ್ನ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತಿ (ಕೆ.ಆರ್.ಇ.ಡಿ.ಎಲ್) ಇಲಾಖೆಯಿಂದ/ ಇತರೆ ಇಲಾಖೆ/ ಸಂಸ್ಥೆಗಳಿಂದ ಸೌರಶಕ್ತಿ ಆಧಾರಿತ ಪಂಪ್‌ಸೆಟ್‌ಗಳಿಗೆ ಸಹಾಯಧನ ಪಡೆದಿರುವುದಿಲ್ಲ ಎಂಬ ಬಗ್ಗೆ ದೃಢೀಕರಣ ಸಲ್ಲಿಸಬೇಕು.
ಸೌರಶಕ್ತಿ ಆಧಾರಿತ ಕೃಷಿ ಪಂಪ್‌ಸೆಟ್‌ಗಳನ್ನು ಕೆ.ಆರ್.ಇ.ಡಿ.ಎಲ್, ಇಂಧನ ಇಲಾಖೆ ಅಧಿಕೃತವಾಗಿ ನೋಂದಾಯಿಸಿದ (ಎಂಪಾನೆಲ್ಡ್) ಕಂಪನಿಗಳಿಂದ ರೈತರೇ ನೇರವಾಗಿ ಖರೀದಿಸಬೇಕು. ಘಟಕ ಅನುಷ್ಠಾನ ಪೂರ್ವ ಕಾರ್ಯಾದೇಶ ಪಡೆಯುವುದು ಕಡ್ಡಾಯವಾಗಿರುತ್ತದೆ. ಆಸಕ್ತ ರೈತರು ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಗೆ ಅಗತ್ಯ ದಾಖಲಾತಿಗಳೊಂದಿಗೆ ಮೇ 31ರೊಳಗೆ ಅರ್ಜಿ ಸಲ್ಲಿಸಬೇಕು.
ಅಗತ್ಯ ದಾಖಲಾತಿಗಳನ್ನು ನಿಗದಿತ ಅರ್ಜಿ ನಮೂನೆ, ಭಾವಚಿತ್ರ, ಪ್ರಸಕ್ತ ಸಾಲಿನ ಪಹಣಿ, ತಾಕಿನ ಪೋಟೋ, ಚೆಕ್‌ಬಂಧಿ, ಕಂದಾಯ ಇಲಾಖೆಯಿಂದ ಗಣಕೀಕೃತ ಬೆಳೆ ದೃಢೀಕರಣ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ರೈತರಾದಲ್ಲಿ ಆರ್.ಡಿ ಸಂಖ್ಯೆಯ ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದ ಜೆರಾಕ್ಸ್‌ಗಳೊಂದಿಗೆ ಆಯಾ ತಾಲ್ಲೂಕಿನ ತೋಟಗಾರಿಕೆ ಇಲಾಖೆಗೆ ಸಲ್ಲಿಸಬೇಕು. ಹೆಚ್ಚಿನ ವಿವರಗಳಿಗೆ ಸದರಿ ಕಚೇರಿಗಳನ್ನು ಸಂಪರ್ಕಿಸುವಂತೆ ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.