ಪಾವಗಡ: ತಾಲೂಕಿನ ವಿವಿಧ ಕಡೆಗಳಲ್ಲಿರುವ ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಪ್ಯಾನಲ್ಗಳಿಗೆ ಅಳವಡಿಸುವ ಕೇಬಲ್ ಕಳ್ಳತನ ಮಾಡುತ್ತಿದ್ದ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಪಾವಗಡ ಪಟ್ಟಣದ ವಾಸಿಗಳಾದ ಮಲ್ಲೇಶ (28) ಬಾಬು(33) ಮಂಜ(28) ಬಂಧಿತರು. 2025 ಜನವರಿ 20ರಂದು ವಳ್ಳೂರು ಗ್ರಾಮದ ಬಳಿಯಿರುವ ಅವಾದ ಸೋಲಾರ್ ಘಟಕದಲ್ಲಿ 1.30 ಲಕ್ಷ ಮೌಲ್ಯದ 2,500 ಮೀಟರ್ ಉದ್ದದ ಕೇಬಲ್ ಕಳ್ಳತನವಾಗಿತ್ತು.
ಈ ಬಗ್ಗೆ ತಿರುಮಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಮಧುಗಿರಿ ಡಿ.ವೈ.ಎಸ್.ಪಿ ಮಂಜುನಾಥ ಮಾರ್ಗದರ್ಶನದಲ್ಲಿ ಸಿಪಿಐ ಗಿರೀಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಂದ 1900 ಮೀಟರ್ ಕೇಬಲ್, 2 ಟಿವಿಎಸ್ ಎಕ್ಸೆಲ್ ವಾಹನ ಮತ್ತು ಒಂದು ಕೇಬಲ್ ಕಟ್ಟರ್ ವಶಪಡಿಸಿಕೊಂಡಿದ್ದಾರೆ. ಇನ್ನೊಬ್ಬ ನಾಗರಾಜು (ನಾಗ)ಎಂಬ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಕಾರ್ಯಾಚರಣೆಯಲ್ಲಿ ಪಾವಗಡ ಗ್ರಾಮಾಂತರ ವೃತ್ತದ ಸಿಪಿಐ ಬಿ.ಸಿ.ಗಿರೀಶ್, ತಿರುಮಣಿ ಪೊಲೀಸ್ ಠಾಣೆ ಪಿಎಸ್ಐ ಲಕ್ಷ್ಮಣ್, ವೈ.ಎನ್.ಹೊಸಕೋಟೆ ಪೊಲೀಸ್ ಠಾಣೆ ಪಿಎಸ್ಐ ಮಾಳಪ್ಪ ನಾಯ್ಯೋಡಿ ಹಾಗೂ ಸಿಬ್ಬಂದಿ ಎ.ಎಸ್.ಐ. ಗೋವಿಂದರಾಜು,ಸೋಮಶೇಖರ್, ಶ್ರೀಕಾಂತ್ನಾಯ್ಕ ಇದ್ದರು.