ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಳ್ಳಬೇಕು: ಡಾ.ಡಿ.ವಿ.ಗುರುಪ್ರಸಾದ್ ಸಲಹೆ

12
Published on

ಮೈಸೂರು: ಜೀವನದಲ್ಲಿ ಸೋತವರು ನಿರಾಶರಾಗದೆ ಸೋಲನ್ನೇ ಯಶಸ್ಸಿನ ಮೆಟ್ಟಿಲಾಗಿಸಿಕೊಳ್ಳಬೇಕು ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಡಾ.ಡಿ.ವಿ.ಗುರುಪ್ರಸಾದ್ ಯುವಜನರಿಗೆ ಸಲಹೆ ನೀಡಿದರು.
ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಧಾರವಾಡದ ಮನೋಹರ ಗ್ರಂಥಮಾಲದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ಆತ್ಮಕತೆ ‘ಕೈಗೆ ಬಂದ ತುತ್ತು’ ನಾಲ್ಕನೇ ಆವೃತ್ತಿ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಬದುಕಿನಲ್ಲಿ ಸೋಲು, ಗೆಲುವು ಸಹಜ. ಸೋಲಿನಿಂದ ಯಾರೂ ಹತಾಶರಾಗಬಾರದು. ಸೋಲನ್ನೇ ಯಶಸ್ಸಿನ ಮೆಟ್ಟಿಲಾಗಿಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು. ಸೋಲಿನಿಂದ ಯಾರೂ ಧೃತಿಗೆಡಬಾರದು. ಸಾಧನೆ ಮಾಡುವುದು ಬಹಳ ಮುಖ್ಯ ಎಂದರು.
ನನ್ನ ಸೋಲನ್ನು ಮೆಟ್ಟಿ ನಿಂತು ಹೇಗೆ ಸಾಧನೆ ಮಾಡಿದೆ ಎನ್ನುವುದನ್ನು ಈ ಕೃತಿಯಲ್ಲಿ ನಿರೂಪಿಸಿದ್ದೇನೆ. ಏನೇ ಕಷ್ಟ ಬಂದರೂ ನಾಳೆ ಒಳಿತು ಆಗುತ್ತದೆ. ಅದಕ್ಕಾಗಿ ಆತ್ಮವಿಶ್ವಾಸ ಕಳೆದುಕೊಳ್ಳದೆ ತಾಳ್ಮೆ, ಸಹನೆಯಿಂದ ಕಾಯಬೇಕು. ಮುಂದೆ ಐಎಸ್‌ಎಸ್ ಪರೀಕ್ಷೆ ಬರೆದು ಪಾಸು ಮಾಡಿ ಸಂದರ್ಶನಕ್ಕೆ ಆಯ್ಕೆಯಾದವರಿಗೆ ಸಂದರ್ಶನ ಹೇಗಿರುತ್ತದೆ ಎನ್ನುವ ಮಾದರಿ ಕುರಿತು ಉಚಿತ ತರಬೇತಿ ನೀಡಲು ನಾನು ಸಿದ್ಧ ಎಂದು ಅವರು ತಿಳಿಸಿದರು.
ಕೃತಿ ಲೋಕಾರ್ಪಣೆ ಮಾಡಿದ ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಯಾರೂ ಹತಾಶೆಗೊಳ್ಳಬೇಕಾಗಿಲ್ಲ. ಸೋತು ಹತಾಶರಾಗಿ ಆತ್ಮಹತ್ಯೆ ಮಾಡಿಕೊಂಡರೆ ಏನು ಪ್ರಯೋಜನ? ಸೋಲನ್ನು ಎದುರಿಸುವ ಧೈರ್ಯವನ್ನು ಯುವಜನರು ಮೈಗೂಡಿಸಿಕೊಳ್ಳಬೇಕು ಎಂದರು.
ಜೀವನದಲ್ಲಿ ಸೋಲೇ ಅಂತ್ಯವಲ್ಲ, ಸೋಲು ಜೀವನದ ಕೊನೆಯಲ್ಲ. ಸೋಲು ಎಂಬುದು ಗೆಲುವಿನ ಸೋಪಾನ. ಡಾ.ಗುರುಪ್ರಸಾದ್ ಬರೆದಿರುವ ಕೃತಿ ಬಹಳ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.
ಸಾಧನೆಗೆ ಶಿಸ್ತು ಮುಖ್ಯ:
ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಬಾನೋತ್ ಮಾತನಾಡಿ, ಸಾಧನೆಗೆ ಶಿಸ್ತು ಬಹಳ ಮುಖ್ಯ. ಕಠಿಣ ಪರಿಶ್ರಮ ಅತ್ಯಗತ್ಯ. ನಾನೂ ಬಡತನದಲ್ಲೇ ಬೆಳೆದವನು. ಪಿಯುಸಿವರೆಗೂ ಭಾಷೆಯ ತೊಡಕು ಇತ್ತು. ಸಾಧನೆ ಮಾಡಲು ಈಗ ನಮಗೆ ಸಾಕಷ್ಟು ರೋಲ್ ಮಾಡೆಲ್‌ಗಳು ಇದ್ದಾರೆ. ಅವರ ಜೀವನ, ಸಾಧನೆಯನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.
ಸಾಹಿತಿ ಡಾ.ಪ್ರಸನ್ನ ಸಂತೇಕಡೂರು ಪುಸ್ತಕ ಪರಿಚಯ ಮಾಡಿಕೊಟ್ಟರು. ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net