

ತಾಳಿಕೋಟೆ: ಜಿಲ್ಲೆಯ ಬಹುತೇಕ ಕಡೆ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಜನ, ಜಾನುವಾರುಗಳು ಹೈರಾಣಾಗಿದ್ದು, ಮಣ್ಣಿನ ಮನೆಯ ಮಾಳಿಗೆಗಳು ಸೋರುತ್ತಿವೆ. ಅದಕ್ಕೆ ಹೊದಿಕೆಗಾಗಿ ಜನರು ಪ್ಲಾಸ್ಟಿಕ್ ಹಾಳೆಯ ಮೊರೆ ಹೋಗುತ್ತಿದ್ದಾರೆ.
ಕಳೆದ 10 ದಿನಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಯು ರಾತ್ರಿ ಹಗಲೆನ್ನದೇ ಮಲೆನಾಡಿನಲ್ಲಿ ಸುರಿದಂತೆ ಸುರಿಯುತ್ತಿದೆ. ಇದರಿಂದ ಮನೆಯ ಮೇಲ್ಛಾವಣೆಯಿಂದ ತಟತಟ ಕೆಳಗೆ ಬೀಳುವ ನೀರಿನ ಹನಿಗಳಿಂದ ರಾತ್ರಿ ಹೊತ್ತು ನಿದ್ದೆ ಮಾಡಲು ಆಗದೇ ಹಗಲು ಹೊತ್ತು ಮನೆಯಲ್ಲಿರಲು ಆಗದ ಸ್ಥಿತಿ ನಿರ್ಮಾಣವಾಗಿದೆ. ಈ ಮೊದಲು ಪ್ಲಾಸ್ಟಿಕ್ ಹೊದಿಕೆಯ ದರ 15ರಿಂದ 20 ರೂ.ಗೆ ಮೀಟರ್ ಸಿಗುತ್ತಿತ್ತು. ಈ ಮಳೆಯಿಂದ ಅದರ ದರವನ್ನು ಮಾರಾಟಗಾರರು ಮೀಟರ್‌ಗೆ 60ರಿಂದ 80 ರೂ.ಗೆ ಏರಿಕೆ ಮಾಡಿದ್ದಾರೆ.
ಜಿಟಿಜಿಟಿ ಮಳೆಯಿಂದ ತಾಲೂಕಿನಲ್ಲಿ ಕೆಲವು ಮನೆಗಳು ಭಾಗಶಃ ಬಿದ್ದು ಹಾನಿಯಾಗಿದ್ದರೆ, ಕೆಲವು ಮನೆಗಳ ಗೋಡೆಗಳು ಕುಸಿದಿವೆ. ಯಾವುದೇ ಜೀವಹಾನಿಯಾದ ವರದಿಯಾಗಿಲ್ಲ. ತಾಲೂಕಿನ ಹೊಸಳ್ಳಿ ಗ್ರಾಮದ ಶಂಕ್ರೇಮ್ಮ ಉಪ್ಪಲದಿನ್ನಿ, ಗಡಿಸೋಮನಾಳ ಗ್ರಾಮದ ಬಲವಂತ್ರಾಯ ಬಿರಾದಾರ, ಕೊಣ್ಣೂರ ಗ್ರಾಮದ ಹುಸೇನಬಿ ಕೊಳ್ಯಾಳ, ಶರಣಸೋಮನಾಳ ಗ್ರಾಮದ ಸಿದ್ದನಗೌಡ ನಾಡಗೌಡ, ಸಾಸನೂರ ಗ್ರಾಮದ ಚನ್ನಮ್ಮ ಬಳಗಾರ ಅವರ ಮನೆಗಳು ಭಾಗಶಃ ಹಾನೀಗೀಡಾಗಿವೆ.
ಮಳೆಯ ಅಭಾವದಿಂದ ಕಂಗೆಟ್ಟು ಹೋಗಿದ್ದ ರೈತಾಪಿ ಜನತೆಗೆ ಕಳೆದ 10 ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮಂದಹಾಸ ತಂದಿದೆ. ಮಳೆ ನಿಂತ ಕೂಡಲೇ ಕೃಷಿ ಚಟುವಟಿಕೆಗಳಿಗೆ ಚುರುಕು ನೀಡಲಿದ್ದಾರೆ. ಈಗಾಗಲೇ ಕೆಲವು ರೈತರು ಒಣ ಭೂಮಿಯಲ್ಲಿಯೇ ತೊಗರಿ, ಹತ್ತಿ ಇನ್ನಿತರ ಬೆಳೆಗಳನ್ನು ಬೆಳೆದಿರುವದರಿಂದ ಈ ಮಳೆಯಿಂದ ಉತ್ತಮ ಫಸಲು ಬರುವ ನಿರೀಕ್ಷೆಯಿದೆ. ತಾಲೂಕಿನಲ್ಲಿ ಒಟ್ಟು 68,610 ಹೆಕ್ಟೇರ್ ಕ್ಷೇತ್ರ ಸಾಗುವಳಿಯಿದ್ದು, ಇದರಲ್ಲಿ ಮುಂಗಾರಿ ಬಿತ್ತನೆಗೆ 41ಸಾವಿರ ಹೆಕ್ಟೇರ್ ಗುರಿಯಲ್ಲಿ 16ಸಾವಿರ ಹೆಕ್ಟೇರ್ ಕ್ಷೇತ್ರದಲ್ಲಿ ತೊಗರಿ, 2ಸಾವಿರ ಹೆಕ್ಟೇರ್ ಕ್ಷೇತ್ರದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ಜು. 31ರವರೆಗೆ ಮುಂಗಾರು ಬಿತ್ತನೆಗೆ ಅವಕಾಶವಿದ್ದು, ಈಗಾಗಲೇ ರೈತರು ಬೀಜ, ಗೊಬ್ಬರ ಖರೀದಿಸಿಕೊಂಡು ಬಿತ್ತನೆಗೆ ಸಜ್ಜಾಗಿದ್ದಾರೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ತಾಲೂಕಿನಲ್ಲಿ ಜಿಟಿಜಿಟಿ ಮಳೆಯಿಂದ ಕೆಲವು ಮನೆಗಳು ಕುಸಿದಿವೆ. ಯಾವುದೇ ಜೀವಹಾನಿಯಾಗಿಲ್ಲ. ಈಗಾಗಲೇ ದಿನನಿತ್ಯ ತಾಲೂಕಿನಲ್ಲಿ ಮಳೆಹಾನಿಯ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಸಲ್ಲಿಸುತ್ತಿದ್ದು, ಕೂಡಲೇ ಪರಿಹಾರ ಮಾರ್ಗೋಪಾಯವನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ. ಕೀರ್ತಿ ಚಾಲಕ, ತಹಸೀಲ್ದಾರ್