

ಕಮಲಾಪುರ: ಸೋಯಾಬೀನ್ ಬೀಜಕ್ಕಾಗಿ ಪಟ್ಟಣದ ರೈತ ಸಂಪರ್ಕ ಕೇಂದ್ರದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದು, ಬೀಜ ವಿತರಣೆ ನಿಲ್ಲಿಸಿರುವುದರಿಂದ ಕೆಲಕಾಲ ನೂಕುನುಗ್ಗಲು ಉಂಟಾಯಿತು.
ಬೆಳಗಾವಿಯಲ್ಲಿ ಕಳಪೆ ಬೀಜಗಳು ವಿತರಣೆಯಾಗಿದ್ದು ಬೆಳಕಿಗೆ ಬಂದಿದ್ದರಿಂದ ಕಲಬುರಗಿ ಜಿಲ್ಲೆಯಲ್ಲಿಯೂ ಬೀಜ ವಿತರಣೆ ಬ್ರೇಕ್ ಹಾಕಲಾಗಿದೆ. ಇದರಿಂದಾಗಿ ರೈತಾಪಿ ವರ್ಗ ಪರದಾಡುವಂತ ಸ್ಥಿತಿ ಉಂಟಾಗಿದೆ. 2020-21ನೇ ಸಾಲಿನ ಮುಂಗಾರು ಹಂಗಾಮಿ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ವಿತರಣೆ ನಡೆಯುತ್ತಿದೆ. ಕಮಲಾಪುರ, ಕಿಣ್ಣಿಸಡಕ್, ಸೊಂತ, ಸಿರಗಾಪುರ, ನಾವದಗಿ ಗ್ರಾಮಗಳಲ್ಲಿ ಬಿತ್ತನ ಬೀಜ ವಿತರಣೆಗೆ ಚಾಲನೆ ನೀಡಲಾಗಿತ್ತು. ಆದರೆ ಇದೀಗ ಸೋಯಾಬೀನ್ ಸ್ಟಾಕ್ ಇಲ್ಲದಿರುವುದರಿಂದ ಕೇಂದ್ರಗಳನ್ನು ಬಂದ್ ಮಾಡಲಾಗಿದೆ.
ಕೇಂದ್ರಗಳಲ್ಲಿ ಕಾಣದ ಪರಸ್ಪರ ಅಂತರಕರೊನಾ ನಿಯಂತ್ರಣಕ್ಕೆ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ. ಅದರಂತೆ ಎಲ್ಲ ಕಚೇರಿಗಳನ್ನು ಪರಸ್ಪರ ಅಂತರ ಕಾಯ್ದುಕೊಳ್ಳಲು ಸೂಚನೆ ನೀಡಿದೆ. ಆದರೆ ತಾಲೂಕಿನ ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರಗಳಲ್ಲಿ ಪರಸ್ಪರ ಅಂತರ ಎಂಬುದು ಮರೀಚಿಕೆಯಾಗಿದೆ. ಒಬ್ಬರ ಮೇಲೊಬ್ಬರೂ ಬಿದ್ದು ಬೀಜ ಪಡೆಯುತ್ತಿದ್ದಾರೆ. ಕಿಟಕಿ, ಬಾಗಿಲುಗಳಿಗೆ ಜೋತು ಬಿದ್ದು ಬೀಜವನ್ನು ಪಡೆಯುವ ವಾತಾವರಣವಿದೆ. ಆದರೆ ಅಧಿಕಾರಿಗಳು ಮಾತ್ರ ತಮಗೇನು ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಕಮಲಾಪುರದಲ್ಲಿ ಹೆಚ್ಚು ಮಳೆ
ಕಮಲಾಪುರ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಉತ್ತಮ ಮಳೆಯಾಗಿದೆ. ಕಮಲಾಪುರ- 21ಮಿಮೀ., ಮಹಾಗಾಂವ್- 20, ಮಹಾಗಾಂವ ಕ್ರಾಸ್- 16.6, ಫರಹತಾಬಾದ್ 3, ಅವರಾದ್ (ಬಿ)- 5.2, ಕಲಬುರಗಿ ಎಚ್ಸಿ- 8, ಕಲಬುರಗಿ ಐಬಿ 4 ಮಿಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ ಎಂದು ಸಹಾಯಕ ಕೃಷಿ ಅಧಿಕಾರಿ ಚಂದ್ರಕಾಂತ ಜೀವಣಗಿ ಮಾಹಿತಿ ನೀಡಿದ್ದಾರೆ.