ಸೋಮೇಶ್ವರ ದೇವಾಲಯ ಅಭಿವೃದ್ಧಿಗೆ ಮೀನ ಮೇಷ

1-klr-2
Published on

ಕೋಲಾರ: ನಗರದ ಕೋಟೆ ಪ್ರದೇಶದಲ್ಲಿ ಇರುವ ಗಂಗರ ಕಾಲದ ಶ್ರೀ ಸೋಮೇಶ್ವರ ದೇವಾಲಯ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಪ್ರಾಚ್ಯವಸ್ತು ಇಲಾಖೆ ಮೀನಮೇಷ ಎಣಿಸುತ್ತಿರುವುದಕ್ಕೆ ಭಕ್ತರಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ದೇವಾಲಯಕ್ಕೆ ಬೇಕಾದ ಅಗತ್ಯ ಸೌಕರ್ಯ ಒದಗಿಸುವುದಕ್ಕೆ ಕಳೆದ ಹತ್ತಾರು ವರ್ಷಗಳಿಂದ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಣ್ಣ-ಪುಟ್ಟ ದುರಸ್ತಿ ಕಾಮಗಾರಿ ಕೈಗೊಳ್ಳುವುದಕ್ಕೆ ಇಚ್ಛಾಶಕ್ತಿ ತೋರುತ್ತಿಲ್ಲ ಎಂದು ಕಿಡಿಕಾರಿದ್ದಾರೆ.

ದೇವಾಲಯ ಮುಂಭಾಗದ ಕಾಂಪೌಂಡ್ ಶಿಥಿಲಗೊಂಡಿದ್ದು ದುರಸ್ತಿಗೆ ಮನವಿ ಮಾಡಿದರೂ ಇಲಾಖೆಯಿಂದ ಸ್ಪಂದನೆ ಸಿಕ್ಕಿಲ್ಲ, ಮುಜರಾಯಿ ಇಲಾಖೆಯವರನ್ನು ಕೇಳಿದಲ್ಲಿ ದೇವಾಲಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ಅಭಿವೃದ್ಧಿ ಕೆಲಸ ಕೈಗೊಳ್ಳಲು ನಮಗೆ ಅಧಿಕಾರವಿಲ್ಲ ಎಂದು ಪ್ರಾಚ್ಯವಸ್ತು ಇಲಾಖೆಯ ಕಡೆ ಬೊಟ್ಟು ಮಾಡುತ್ತಾರೆ, ಜಿಲ್ಲಾಧಿಕಾರಿ ಹಾಗೂ ಸಂಸದರು ಒಮ್ಮೆ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗಬಹುದೆಂದು ಆಹ್ವಾನ ನೀಡಿದ್ದಾರೆ.

ದೇವಾಲಯದ ಗೋಪುರದ ಕಳಸ ವಿಗ್ನವಾಗಿದೆ. ಗೋಪುರದಲ್ಲಿ ಬಿರುಕು ಕಾಣಿಸಿಕೊಂಡಿದೆ, ಪ್ರತಿ ಸೋಮವಾರ, ಕಾರ್ತಿಕ ಮಾಸ ಹಾಗೂ ಹಬ್ಬಗಳ ಸಂದರ್ಭದಲ್ಲಿ ಕೇವಲ ಕೋಲಾರದವರಲ್ಲದೆ ಹೊರ ಜಿಲ್ಲೆ, ನೆರೆ ರಾಜ್ಯಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ, ಇವರ ಸುರಕ್ಷತೆಗಾಗಿ ಶಿಥಲಗೊಂಡಿರುವ ದೇವಾಲಯಕ್ಕೆ ಕಾಯಕಲ್ಪ ನೀಡಬೇಕೆಂದು ಒತ್ತಾಯಿಸಿದ್ದಾರೆ.

ದೇವಾಲಯಕ್ಕೆ ದೂರದ ಊರುಗಳಿಂದ ಬರುವ ಭಕ್ತರ ಅನುಕೂಲಕ್ಕೆ ತಂಗುದಾಣ, ವಾಹನಗಳ ಪಾರ್ಕಿಂಗ್, ಶೌಚಗೃಹ, ಶುದ್ಧ ನೀರು, ಪಾದರಕ್ಷೆ ಸ್ಟ್ಯಾಂಡ್ ವ್ಯವಸ್ಥೆ ಇಲ್ಲ, ಮುಖ್ಯದ್ವಾರದ ಬಳಿ ಭಿಕ್ಷೆಗಾಗಿ ಕುಳಿತುಕೊಳ್ಳುವವರಿಂದ ಕಿರಿಕಿರಿ, ಹೂವು, ಹಣ್ಣು ಇನ್ನಿತರ ಪೂಜಾ ಸಾಮಗ್ರಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ಮಳಿಗೆ ಇಲ್ಲದಿರುವುದರ ಬಗ್ಗೆ ಅರಿವಿದ್ದರೂ ಸಂಬಂಧಪಟ್ಟವರು ಕೇಂದ್ರ ಸರ್ಕಾರದ ಅನುದಾನ ಇಲ್ಲವೆ ದಾನಿಗಳಿಂದ ಸಹಾಯ ಪಡೆದು ಅಭಿವೃದ್ಧಿ ಕಾರ್ಯಗಳಿಗೆ ಬದ್ಧತೆ ತೋರದಿರುವುದು ಜಿಜ್ಞಾಸೆಯನ್ನುಂಟು ಮಾಡಿದೆ.

ಇಲಿಗಳ ಕಾಟ: ದೇವಾಲಯದೊಳಗೆ ಮತ್ತು ಗರ್ಭಗುಡಿಯಲ್ಲಿ ಕಿಟಕಿ ಹಾಳಾಗಿರುವುದರಿಂದ ಇಲಿಗಳು ನುಸುಳುವುದಕ್ಕೆ ದಾರಿ ಮಾಡಿಕೊಟ್ಟಂತಾಗಿದೆ, ಭಕ್ತರು ಪ್ರತಿ ಸೋಮವಾರ ಇನ್ನಿತರ ಸಂದರ್ಭಗಳಲ್ಲಿ ಬಸವಣ್ಣನ ವಿಗ್ರಹದ ಮುಂದೆ ದೀಪ ಬೆಳಗುವುದು ವಾಡಿಕೆಯಾಗಿದ್ದು, ಇದರಿಂದ ಬಸವಣ್ಣನ ವಿಗ್ರಹನಕ್ಕೆ ಹಾನಿಯಾಗುವ ಸಾಧ್ಯತೆಯಿರುವುದರಿಂದ ವಿಗ್ರಹ ರಕ್ಷಣೆಗೆ ಗಮನ ಹರಿಸುವ ಜತೆಗೆ ನವಗ್ರಹಗಳ ಪೀಠಕ್ಕೂ ಭದ್ರತೆ ಒದಗಿಸಬೇಕೆಂಬ ಕೂಗು ಕೇಳಿ ಬಂದಿದೆ.

ಪಾರ್ವತಿಗೆ ನೀರಿಲ್ಲ: ದೇವಾಲಯ ಹಿಂಭಾಗ ಪಾರ್ವತಿ ದೇವಿಯ ಪ್ರತ್ಯೇಕ ಗುಡಿ ನಿರ್ಮಿಸಲಾಗಿದೆ, ನಿರ್ವಹಣೆ ಇಲ್ಲದೆ ಮಳೆಗಾಲದಲ್ಲಿ ಗುಡಿಯೊಳಗೆ ನೀರು ಜಿನುಗುವುದರಿಂದ ಪೂಜಾ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಶ್ರೀ ಸೋಮೇಶ್ವರ ದೇವಾಲಯದಲ್ಲೂ ಇದೆ ಪರಿಸ್ಥಿತಿ ಇದೆ. ಪಾರ್ವತಮ್ಮ ದೇವಿಗೆ ಅಭಿಷೇಕಕ್ಕೆ ನೀರಿನ ಸಮಸ್ಯೆ ಎದುರಾಗಿದೆ, ಕೂಗಳತೆಯಲ್ಲಿರುವ ಕೋಲಾರಮ್ಮ ದೇವಾಲಯದಿಂದ ಪೈಪ್‌ಲೈನ್ ಅಳವಡಿಸಲು ಅವಕಾಶವಿದ್ದರೂ ಮೀನಮೇಷ ಎಣಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವಾಗಿರುವ ಪುರಾತನ ಶ್ರೀ ಸೋಮೇಶ್ವರ ದೇವಾಲಯ ಹಾಗೂ ಇನ್ನಿತರ ಗುಡಿ, ಗೋಪುರ ಸಂರಕ್ಷಣೆಗೆ ಕೇಂದ್ರ ಸರ್ಕಾರ ಗಮನ ಹರಿಸುವಂತೆ ಮಾಡುವುದು ಸಂಸದರ ಹಾಗೂ ಜನಪ್ರತಿನಿಧಿಗಳ ಕರ್ತವ್ಯವಾಗಿದ್ದು, ಸರ್ಕಾರದಲ್ಲಿ ಅನುದಾನ ಕೊರತೆ ಇದ್ದಲ್ಲಿ ದಾನಿಗಳ ಸಹಕಾರದಿಂದ ಅಭಿವೃದ್ಧಿ ಕೆಲಸಕ್ಕೆ ಚಾಲನೆ ದೊರಕಿಸಬೇಕೆಂಬುದು ಭಕ್ತರ ಒತ್ತಾಸೆ.

ಶ್ರೀ ಸೋಮೇಶ್ವರ ದೇವಾಲಯ ಅಭಿವೃದ್ಧಿ ವಿಚಾರವಾಗಿ ನಮ್ಮ ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರು ತಿಳಿಸಿದ್ದಾರೆ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮಕ್ಕೆ ಸೂಚಿಸುವೆ. ಎಸ್.ಮುನಿಸ್ವಾಮಿ, ಸಂಸದ, ಕೋಲಾರ ಸೋಮೇಶ್ವರ ದೇವಾಲಯಕ್ಕೆ ಕಾಯಕಲ್ಪ ನೀಡಬೇಕೆಂದು ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ, ಕರೊನಾದಿಂದ ಕಾಮಗಾರಿಗೆ ಟೆಂಡರ್ ಕರೆಯಲು ವಿಳಂಬವಾಗಿರುವುದಾಗಿ ತಿಳಿಸಿದ್ದಾರೆ, ವಾರದಲ್ಲಿ ಸೂಕ್ತ ಸ್ಪಂದನೆ ಸಿಗದಿದ್ದರೆ ಹೋರಾಟ ಹಮ್ಮಿಕೊಳ್ಳಲಾಗುವುದು, ಜಿಲ್ಲೆಯಲ್ಲಿನ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳ ಅಭಿವೃದ್ಧಿಗೂ ಜಿಲ್ಲಾ ಆಡಳಿತ ಗಮನ ಹರಿಸಬೇಕು. ಕುರುಬರಪೇಟೆ ವೆಂಕಟೇಶ್, ಮಾರ್ಗದರ್ಶಕ, ಹಿಂದು ದೇವಾಲಯಗಳ ಹಿತ ಸಂರಕ್ಷಣಾ ಸಮಿತಿ, ಕೋಲಾರ ದೇವಾಲಯ ಸಮಗ್ರ ಅಭಿವೃದ್ಧಿ ಹಾಗೂ ಅಗತ್ಯ ಸವಲತ್ತುಗಳಿಗಾಗಿ ಪ್ರಾಚ್ಯವಸ್ತು ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ, ದೇಗುಲದ ಗೋಪುರದ ಮೇಲಿನ ಕಳಸಗಳು ವಿಗ್ನವಾಗಿದ್ದು, ಇದರಿಂದ ಅಪಶಕುನ ಉಂಟಾಗಿರುವುದರಿಂದ ಬೇಗ ದುರಸ್ತಿಗೊಳಿಸಬೇಕು. ವೆಂಕಟೇಶ್, ಅರ್ಚಕ, ಸೋಮೇಶ್ವರ ದೇವಾಲಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net