ಸೋಮವಾರವೂ ಸುರಿದ ಮಳೆ

Rain Vehicle Road
ಸಾಂದರ್ಭಿಕ ಚಿತ್ರ
Published on

ಹುಬ್ಬಳ್ಳಿ : ಧಾರವಾಡ ಜಿಲ್ಲೆಯ ವಿವಿಧೆಡೆ ಸೋಮವಾರವೂ ಮಳೆ ಸುರಿದಿದೆ. ಭಾನುವಾರ ಹುಬ್ಬಳ್ಳಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಒಂದು ತಾಸಿಗೂ ಹೆಚ್ಚು ಧಾರಾಕಾರ ಮಳೆ ಸುರಿದಿತ್ತು. ಇದರಿಂದಾಗಿ ಕೆಲವೆಡೆ ಮರಗಳು ಧರೆಗುರುಳಿದ್ದು, ತಗ್ಗು ಪ್ರದೇಶದಲ್ಲಿ ನೀರು ನುಗ್ಗಿತ್ತು.

ಭಾನುವಾರ ಮಳೆ ಸುರಿದಿದ್ದರೂ ಸೋಮವಾರ ಬೆಳಗ್ಗೆ ಬಿಸಿಲಿನ ತಾಪ ಏರಿತ್ತು. ಸಂಜೆ ಅಂದಾಜು 5.30ಕ್ಕೆ ಹುಬ್ಬಳ್ಳಿ- ಧಾರವಾಡ ಸೇರಿದಂತೆ ಜಿಲ್ಲೆಯ ಬಹುತೇಕ ಪ್ರದೇಶಗಳಲ್ಲಿ ಮಳೆ ಸುರಿದ ವರದಿಯಾಗಿದೆ.

ಮಳೆಯಿಂದಾಗಿ ಹುಬ್ಬಳ್ಳಿ-ಧಾರವಾಡ ಮಧ್ಯದ ಬಿಆರ್​ಟಿಎಸ್ ಕಾರಿಡಾರ್​ನ ಅಲ್ಲಲ್ಲಿ ನೀರು ನಿಂತಿತ್ತು. ಸಂಜೆ ಸುಮಾರು ಅರ್ಧ ತಾಸು ಸುರಿದು ಬಿಡುವು ಕೊಟ್ಟಿದ್ದ ಮಳೆ, ರಾತ್ರಿ ಮಿಂಚುಗಳ ಮಧ್ಯೆ ಆಗಾಗ್ಗೆ ಅಬ್ಬರಿಸಿತು.

ಸೋಮವಾರ ಬೀಸಿದ ಗಾಳಿ, ಸುರಿದ ಮಳೆಯಿಂದಾಗಿ ಮರಗಳು ಬಿದ್ದಿರುವ ಘಟನೆಗಳು ವರದಿಯಾಗಿಲ್ಲ.

ಕಳೆದ ಒಂದೂವರೆ ತಿಂಗಳಿಂದ ಬಿಸಿಲಿನ ತಾಪ ಏರಿತ್ತು. ಜನರು ಮಧ್ಯಾಹ್ನದ ಹೊತ್ತಿಗೆ ಮನೆಯಿಂದ ಹೊರಗೆ ಬಾರದಂತಹ ಸ್ಥಿತಿ ನಿರ್ವಣಗೊಂಡಿತ್ತು. ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಪ ಕಡಿಮೆಯಾಗಿದೆ.

ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರೈತರು ಸಹ ನಿಟ್ಟುಸಿರು ಬಿಡುವಂತಾಗಿದೆ. ಈ ಬಾರಿ ಮಳೆ ಕೈಕೊಟ್ಟಿತು ಎಂದೇ ಭಾವಿಸಿದ್ದ ಕೃಷಿಕರಿಗೆ, ಮಳೆಯಿಂದಾಗಿ ಚಿಂತೆ ದೂರವಾದಂತಾಗಿದೆ.

ರೈತರು ಬಿತ್ತನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೊಲವನ್ನು ಹದಗೊಳಿಸಲು ತಯಾರಿ ಮಾಡುತ್ತಿದ್ದಾರೆ. ಮಳೆ ಬಿಡುವು ಕೊಟ್ಟ ನಂತರ ಹೊಲ ಹದಗೊಳಿಸಿ, ಬಿತ್ತನೆ ಕಾರ್ಯ ಪ್ರಾರಂಭಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net