ಚಾಮರಾಜನಗರ: ನಗರದ ಸೋಮವಾರಪೇಟೆಯ ಶ್ರೀಆಂಜನೇಯಸ್ವಾಮಿ ದೇವಸ್ಥಾನದ ಬೀದಿಯಲ್ಲಿರುವ ಮನೆಯೊಂದರಲ್ಲಿ ಬುಧವಾರ ರಾತ್ರಿ ಕಳ್ಳತನ ನಡೆದಿದೆ.
ಬಡಾವಣೆಯ ಮಾದಲಾಂಬಿಕೆ ಎಂಬುವವರ ಮನೆಯಲ್ಲಿ ತಡರಾತ್ರಿ ಕಳ್ಳತನ ನಡೆದಿದ್ದು, ಅಂದಾಜು 3 ಲಕ್ಷ ರೂ, ಮೌಲ್ಯದ ಸುಮಾರು 46 ಗ್ರಾಂ ಚಿನ್ನಾಭರಣ ಹಾಗೂ 1 ಲಕ್ಷ ರೂ. ಹಣವನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ. ಮಾದಲಾಂಬಿಕೆ ಅವರ ತಾಯಿ ಪುಟ್ಟನಂಜಮ್ಮ ಮೃತಪಟ್ಟಿದ್ದರಿಂದ ಹರವೆ ಗ್ರಾಮಕ್ಕೆ ತೆರಳಿದ್ದರು. ತಾಯಿಯ ಶವಸಂಸ್ಕಾರ ಹಾಗೂ ಹಾಲು ತುಪ್ಪ ಕಾರ್ಯವನ್ನು ಮುಗಿಸಿ ಬರುವಷ್ಟರಲ್ಲಿ ಮನೆಯಲ್ಲಿ ಕಳ್ಳತನವಾಗಿದೆ.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್.ಶಶಿಧರ್, ಸರ್ಕಲ್ ಇನ್ಸ್‌ಪೆಕ್ಟರ್ ಬಸವರಾಜು, ಪಟ್ಟಣ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅಯ್ಯನಗೌಡ ಪರಿಶೀಲನೆ ನಡೆಸಿದರು. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.