ಸೋಮವಾರಪೇಟೆ ಭಾಗದಲ್ಲಿ ಧಾರಾಕಾರ ಮಳೆ

22spt2
Published on

ಕೊಡಗು: ಸೋಮವಾಪೇಟೆ ಕಳೆದ ನಾಲ್ಕು ದಿನಗಳಿಂದ ತಾಲೂಕಿನ ಗ್ರಾಮೀಣ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿ ಬಹುತೇಕ ಗ್ರಾಮಗಳು ಕತ್ತಲೆಯಲ್ಲಿವೆ.

ಗ್ರಾಮೀಣ ಭಾಗದಲ್ಲಿ ವಿದ್ಯುತ್ ಇಲ್ಲದೆ ಕುಡಿಯುವ ನೀರಿಗೂ ಸಮಸ್ಯೆಯಾಗಿದೆ. ಮಳೆಯ ನೀರನ್ನೇ ಅವಲಂಬಿಸಬೇಕಾಗಿದೆ. ಬೆಳಕು ಕಲ್ಪಿಸಲು ಇಲ್ಲಿನ ಸೆಸ್ಕ್ ಸಿಬ್ಬಂದಿ ಹರಸಾಹಸಪಡುವಂತಾಗಿದೆ.

ಕಳೆದ ವರ್ಷದ ಮುಂಗಾರಿನಲ್ಲಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ, ಶಾಂತಳ್ಳಿ ಹೋಬಳಿಯ ಬಹುತೇಕ ಗ್ರಾಮಗಳು ವಾರಗಟ್ಟಲೆ ಕತ್ತಲೆಯಲ್ಲಿದ್ದವು. ನೂರಾರು ಮರಗಳು ವಿದ್ಯುತ್ ತಂತಿಗಳ ಮೇಲೆ ಮುರಿದು ಬಿದ್ದು ಹೆಚ್ಚಿನ ಹಾನಿಯಾಗಿತ್ತು. ನೂರಾರು ಕಂಬಗಳು ನೆಲಕ್ಕುರುಳಿದ್ದವು. ಹತ್ತಾರು ಟ್ರಾನ್ಸ್‌ಫಾರ್ಮರ್‌ಗಳು ಹಾಳಾಗಿದ್ದವು.

ಪ್ರಸಕ್ತ ಮಳೆಗಾಲದಲ್ಲಿ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗದಂತೆ ಪಟ್ಟಣದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಉಪ ವಿಭಾಗದಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದರೂ, ಶಾಂತಳ್ಳಿ ಹೋಬಳಿಯ ಅತಿಹೆಚ್ಚು ಮಳೆ ಬೀಳುವ ಪುಷ್ಪಗಿರಿ ತಪ್ಪಲಿನ ಗ್ರಾಮಗಳಲ್ಲಿ ಸುರಿದ ಧಾರಾಕಾರ ಮಳೆಗೆ ಮರಗಳು ಧರೆಗುಳಿದು, ವಿದ್ಯುತ್ ಕಂಬಗಳಿಗೆ ಹಾಗೂ ತಂತಿಗೆ ಹಾನಿಯಾಗಿದೆ.
ಕಳೆದ 4 ದಿನಗಳಿಂದ ಶಾಂತಳ್ಳಿ, ಬೆಟ್ಟದಳ್ಳಿ, ಪುಷ್ಪಗಿರಿ, ಹರಗ, ಕೊತ್ನಳ್ಳಿ, ಬೀದಳ್ಳಿ, ಹೆಗ್ಗಡಮನೆ, ಕುಂದಳ್ಳಿ, ಕುಮಾರಳ್ಳಿ, ಬಾಚಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ಕತ್ತಲೆಯಲ್ಲಿವೆ. ಕಾಫಿ ತೋಟದೊಳಗೆ ವಿದ್ಯುತ್ ತಂತಿ ಮೇಲೆ ಮರಗಳು ಬಿದ್ದಿರುವ ಪರಿಣಾಮ ಸೆಸ್ಕ್ ಸಿಬ್ಬಂದಿ ಹುಡುಕಾಟ ಮಾಡಬೇಕಾಗಿದೆ.

ತಾಕೇರಿ, ಕಿರಗಂದೂರು, ಬಿಳಿಗೇರಿ ವಿದ್ಯುತ್ ಮಾರ್ಗಕ್ಕೆ ಹಾನಿಯಾಗಿದೆ. ತೋಳೂರು ಶೆಟ್ಟಳ್ಳಿ, ಕೂತಿ, ಎಡದಂಟೆ ದೊಡ್ಡತೋಳೂರು ಗ್ರಾಮಗಳ ಮಾರ್ಗದಲ್ಲೂ ಹಾನಿಯಾಗಿದೆ. ಬೀಟಿಕಟ್ಟೆ, ಗೌಡಳ್ಳಿ, ಹಿರಿಕರ, ಕೂಗೂರು, ದೊಡ್ಡಮಳ್ತೆ, ಆಲೂರು, ಅಂಕನಳ್ಳಿ, ಮಾದ್ರೆ, ದುಂಡಳ್ಳಿ ಸುತ್ತಮುತ್ತಲ ಗ್ರಾಮಗಳಲ್ಲಿ ಮೂರು ದಿನಗಳಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.

100 ಕಂಬಗಳ ಸಂಗ್ರಹವಿದೆ. ಅವಶ್ಯಕತೆಯಿದ್ದಾಗ ಮಡಿಕೇರಿಯಿಂದ ಕಂಬಗಳು ಹಾಗೂ ಟ್ರಾನ್ಸ್‌ಫಾರ್ಮರ್ ತರಲು ಲಾರಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಪಿಕಪ್ ವಾಹನ ಸಿದ್ಧವಿದೆ. 4 ಜನ ಮೆಕಾನಿಕ್‌ಗಳು, 3 ಪವರ್‌ಮ್ಯಾನ್‌ಗಳು, 2 ಜನ ಎಪಿಎಂಗಳು, 12 ಜನ ಜೂನಿಯರ್ ಪಿಎಂಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಅವಶ್ಯಕತೆ ತಕ್ಕಂತೆ ಸಿಬ್ಬಂದಿ, ಸಲಕರಣೆಗಳನ್ನು ತರಿಸಿಕೊಳ್ಳುವ ವ್ಯವಸ್ಥೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net