ಸೋಮವಂಶ ಆರ್ಯಕ್ಷತ್ರಿಯ ಅತ್ಯಂತ ಸ್ವಾಭಿಮಾನಿ, ದೇಶಪ್ರೇಮಿ ಸಮಾಜ: ಬಿ.ವೈ.ರಾಘವೇಂದ್ರ

SKP WEB
Published on

ಶಿಕಾರಿಪುರ: ಸೋಮವಂಶ ಆರ್ಯಕ್ಷತ್ರಿಯ ಸಮಾಜ ಅತ್ಯಂತ ಸ್ವಾಭಿಮಾನಿ, ಶೌರ್ಯ ಮತ್ತು ದೇಶಪ್ರೇಮಿ ಸಮಾಜವಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.

ಗುರುವಾರ ಸೋಮವಂಶ ಆರ್ಯಕ್ಷತ್ರಿಯ (ಚಿತ್ರಗಾರ್) ಸಮಾಜದ ಸಮುದಾಯ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಈ ಸಮಾಜವು ಸಮಾಜಮುಖಿ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ತನ್ನನ್ನು ಗುರುತಿಸಿಕೊಂಡು ಧರ್ಮಕಾರ್ಯಗಳನ್ನು ಮಾಡುತ್ತಿರುವ ಸಮಾಜ. ಈ ಸಮಾಜ ಇನ್ನೂ ಶೈಕ್ಷಣಿಕವಾಗಿ, ಆರ್ಥಿಕವಾಗಿ ರಾಜಕೀಯವಾಗಿಯೂ ಮುಂದೆ ಬರಬೇಕಾಗಿದೆ. ಸಮಾಜದ ಅಭಿವೃದ್ಧಿಗೆ ಯಡಿಯೂರಪ್ಪ ಅವರು ಮುಖ್ಯ ಮಂತ್ರಿಯಾಗಿದ್ದಾಗ ಸಾಕಷ್ಟು ಶ್ರಮಿಸಿದ್ದಾರೆ. ಸಮಾಜದ ಬಂಧುಗಳು ಶಿಕ್ಷಣದ ಕಡೆಗೆ ಹೆಚ್ಚಿನ ಗಮನಕೊಡಬೇಕು ಎಂದರು.

ಯಡಿಯೂರಪ್ಪ ಅವರ ದೂರದೃಷ್ಟಿ ಮತ್ತು ಸಾಮಾಜಿಕ ಕಳಕಳಿಯ ಫಲವಾಗಿ ಶಿಕಾರಿಪುರ ತಾಲೂಕು ನಾಡಿನಲ್ಲಿ ಅಭಿವೃದ್ಧಿಯಲ್ಲಿ ಮಾದರಿ ತಾಲೂಕಾಗುವ ನಿಟ್ಟಿನಲ್ಲಿ ಮೊದಲ ಸ್ಥಾನದಲ್ಲಿದೆ. ಅತಿ ಹೆಚ್ಚು ಅನುದಾನವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ತರಲಾಗಿದೆ. ಅಭಿವೃದ್ಧಿ ಗೆ ಮೊದಲ ಆದ್ಯತೆ ನೀಡಲಾಗಿದೆ. ಜನತೆಗೆ ಮೂಲ ಸೌಕರ್ಯ ಕಲ್ಪಿಸುವುದರ ಜತೆಗೆ ಕೃಷಿಗೆ ಆದ್ಯತೆ ನೀಡಿ ನೀರಾವರಿ ಯೋಜನೆ ಜಾರಿ ಮಾಡಿ ಜನರ ಬದುಕು ಕಟ್ಟುವ ಕೆಲಸ ಮಾಡಿದ್ದಾರೆ. ಅವರೊಬ್ಬ ಆಧುನಿಕ ಭಗೀರಥ ಅಷ್ಟೇ ಅಲ್ಲ, ಆಧುನಿಕ ಜಕಣಾಚಾರಿಯೂ ಹೌದು ಎಂದು ಬಣ್ಣಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net