ಸೋಮನಾಥಪುರದಲ್ಲಿ ಜಿಲ್ಲಾಡಳಿತದ ವಾಸ್ತವ್ಯ

DC11111
Published on

ಚಿಕ್ಕಬಳ್ಳಾಪುರ: ಹಳ್ಳಿ ಜನರ ಮನೆ ಬಳಿಗೆ ತೆರಳಿ ಕುಂದು ಕೊರತೆಗಳನ್ನು ಬಗೆಹರಿಸುವ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ’ ಗ್ರಾಮವಾಸ್ತವ್ಯಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದ್ದು, ಈ ಬಾರಿ ಬಾಗೇಪಲ್ಲಿ ತಾಲೂಕು ಪಾತಪಾಳ್ಯ ಹೋಬಳಿಯ ಸೋಮನಾಥಪುರವನ್ನು ಆಯ್ಕೆ ಮಾಡಲಾಗಿದೆ.

ಮಾ.19 ರಂದು ಜಿಲ್ಲಾಧಿಕಾರಿ ಆರ್.ಲತಾ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಕುಡಿಯುವ ನೀರು, ರಸ್ತೆ, ನೈರ್ಮಲ್ಯ, ಮೂಲಸೌಕರ್ಯ ಕೊರತೆಗಳನ್ನು ಸ್ಥಳದಲ್ಲಿಯೇ ಆಲಿಸಿ, ಬಗೆಹರಿಸಲಿದ್ದಾರೆ. ಸಾಮಾಜಿಕ ಭದ್ರತೆ, ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆ, ಇ-ಶ್ರಮ್, ಪಡಿತರ, ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ, ಪೋಡಿ, ಹದ್ದುಬಸ್ತು, ಆಧಾರ್, ಪೌತಿ ಖಾತೆ, ಪಹಣಿ ತಿದ್ದುಪಡಿ, ಆಶ್ರಯ ವಸತಿ ಸೇರಿ ವಿವಿಧ ಅಗತ್ಯ ಸವಲತ್ತುಗಳನ್ನು ಒದಗಿಸಲಿದ್ದಾರೆ.

ಕಾರ್ಯಕ್ರಮದಡಿ ಪ್ರತಿ ತಿಂಗಳ ಮೂರನೇ ಶನಿವಾರದಂದು ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಗ್ರಾಮ ವಾಸ್ತವ್ಯ ಹೂಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಜಿಲ್ಲಾಧಿಕಾರಿ ಮತ್ತು ಆಯಾ ತಹಸೀಲ್ದಾರ್ ನೇತೃತ್ವದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಗ್ರಾಮಕ್ಕೆ ತೆರಳಿ ಜನರೊಂದಿಗೆ ಬೆರೆಯಬೇಕು. ಬೆಳಗ್ಗೆಯಿಂದ ಸವಲತ್ತು ವಿತರಣೆಯ ವಿವಿಧ ಕಾರ್ಯಕ್ರಮಗಳೊಂದಿಗೆ ಕಾಲ ಕಳೆದು, ರಾತ್ರಿ ಅಲ್ಲಿಯೇ ಮಲಗಬೇಕು. ಭಾನುವಾರದೊಳಗೆ ಸಲ್ಲಿಕೆಯಾದ ಅರ್ಜಿಗಳನ್ನು ಇತ್ಯರ್ಥಪಡಿಸಿ ವಾಪಸಾಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯಕ್ಕೆ ಜಿಲ್ಲಾ ಮತ್ತು ತಾಲೂಕು ಆಡಳಿತಗಳು ಅಗತ್ಯ ಸಿದ್ಧತೆಗಳನ್ನು ಕೈಗೊಂಡಿವೆ.

ಗ್ರಾಮ ವಾಸ್ತವ್ಯದ ಹಳ್ಳಿಗಳು: ಕಳೆದ ಫೆಬ್ರವರಿಯಲ್ಲಿ ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯದಲ್ಲಿ ಸಚಿವ ಡಾ.ಕೆ.ಸುಧಾಕರ್ ಮತ್ತು ಜಿಲ್ಲಾಧಿಕಾರಿ ಆರ್.ಲತಾ ಸೇರಿ ವಿವಿಧ ಅಧಿಕಾರಿಗಳು ವಾಸ್ತವ್ಯಹೂಡಿ, ಸರ್ಕಾರದ ವಿವಿಧ ಯೋಜನೆಯಡಿ ಆಯ್ಕೆಯಾದ 4,266 ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿದ್ದು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಉದ್ಘಾಟನೆ, ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಕೃಷಿ ವಸ್ತು ಪ್ರದರ್ಶನ, ಸರ್ಕಾರಿ ಯೋಜನೆಗಳ ಜಾಗೃತಿ ಮತ್ತು ಅನುಷ್ಠಾನಕ್ಕಾಗಿ ಮಾಹಿತಿ ಕೇಂದ್ರ, ಅರ್ಜಿ ಸ್ವೀಕಾರ ಕೇಂದ್ರ ಮತ್ತು ಮಳಿಗೆಗಳ ಸ್ಥಾಪನೆ, ಸಾಂಸ್ಕೃತಿಕ ಕಾರ್ಯಕ್ರಮ, ದಲಿತರ ಮನೆಯಲ್ಲಿ ಭೋಜನ, ಜನರೊಂದಿಗೆ ಸಂವಾದ, ಕ್ರೀಡೆ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು ಗಮನ ಸೆಳೆದಿತ್ತು. ಇದಕ್ಕೂ ಮೊದಲು ಜಿಲ್ಲಾಮಟ್ಟದಲ್ಲಿ ಶಿಡ್ಲಘಟ್ಟ ತಾಲೂಕಿನ ಬೋಧಗೂರು, ಗುಡಿಬಂಡೆ ತಾಲೂಕಿನ ಹಂಪಸಂದ್ರ, ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿಯ ಪುರ ಗ್ರಾಮದಲ್ಲಿ ವಾಸ್ತವ್ಯ ಹೂಡಿ, ಜನರ ಸಮಸ್ಯೆಗಳನ್ನು ಬಗೆಹರಿಸಲಾಗಿದೆ.

ಬಾಗೇಪಲ್ಲಿ ತಾಲೂಕಿನ ಸೋಮನಾಥಪುರದಲ್ಲಿ ಮಾ.19 ರಂದು ಗ್ರಾಮವಾಸ್ತವ್ಯ ಹೂಡಲಿದ್ದು ಇದಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಕೈಗೊಂಡಿದೆ. ಆರ್.ಲತಾ, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net