

ನಾಗಮಂಗಲ: ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಸೋಮನಹಳ್ಳಿ ಅಮ್ಮನವರ ಕ್ಷೇತ್ರದಲ್ಲಿ ಭಾನುವಾರ ಮಧ್ಯಾಹ್ನ ಆಯೋಜಿಸಿದ್ದ ವಿಜೃಂಭಣೆಯ ಬ್ರಹ್ಮರಥೋತ್ಸವದ ಮೂಲಕ ಕಳೆದ ಹತ್ತು ದಿನಗಳ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಒಂಬತ್ತು ದಿನಗಳಿಂದ ಅಂಕುರಾರ್ಪಣೆ, ಪಂಚಾಮೃತಾಭಿಷೇಕ, ದನಗಳ ಜಾತ್ರೆ, ಬಿಸಿಲು ಕೊಂಡೋತ್ಸವ, 101 ಮಡೆ ಆರತಿ ಸೇವೆ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ಭಾನುವಾರ ಮಧ್ಯಾಹ್ನ 1.45ಕ್ಕೆ ಶ್ರೀ ಅಮ್ಮನವರ ಬ್ರಹ್ಮರಥೋತ್ಸವಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ನೆರೆದಿದ್ದ ಸಹಸ್ರಾರು ಭಕ್ತರು ದೇವಸ್ಥಾನದ ಸುತ್ತ ಪ್ರದಕ್ಷಿಣೆ ಸಾಗಿದ ರಥಕ್ಕೆ ಹಣ್ಣು-ದವನ ಎಸೆದು ಭಕ್ತಿ ಮೆರೆದರು.
ರಥೋತ್ಸವದ ಬಳಿಕ ದೇವಸ್ಥಾನದಲ್ಲಿ ಸಂಜೆ ವರೆಗೂ ದೇವಿಯ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ದೂರದ ಊರುಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆರು. ದೇವಿಯ ಮೂಲ ಸ್ಥಾನ ಚಿಣ್ಯ ಸೇರಿದಂತೆ, ಹೊಣಕೆರೆ, ವಡ್ಡರಹಳ್ಳಿ, ಗುಡ್ಡೇನಹಳ್ಳಿ, ಸೋಮನಹಳ್ಳಿ, ಅಲ್ಪಹಳ್ಳಿ, ಜೋಡಿಹೊಸೂರು, ಗಂಗನಹಳ್ಳಿ, ಕನಗೋನಹಳ್ಳಿ, ಕುಪ್ಪಹಳ್ಳಿ, ಕೆಮ್ಮನಹಳ್ಳಿ ಸೇರಿದಂತೆ ಜಿಲ್ಲೆ ಮತ್ತು ನಾಡಿನ ವಿವಿದೆಢೆಯಿಂದ ಆಗಮಿಸಿದ್ದ ಸಹ್ರಾರು ಭಕ್ತರು ಬ್ರಹ್ಮ ರಥೋತ್ಸವಕ್ಕೆ ಸಾಕ್ಷಿಯಾಗಿದರು.
ಭಕ್ತರಿಗೆ ತುರುವೇಕೆರೆಯ ಗೀತಾ ಮತ್ತು ರಾಜಣ್ಣ ದಂಪತಿ ಅನ್ನ ಸಂತರ್ಪಣೆ ಮಾಡಿದ್ದರು ಸನ್ನಿಧಿಯ ಶ್ರೀ ಕೋಟೆಮಾರಮ್ಮದೇವಿ ಮತ್ತು ಶ್ರೀ ಆಂಜನೇಯಸ್ವಾಮಿ,ಶ್ರೀ ದೊಡ್ಡಮ್ಮ ಹಾಗೂ ಶ್ರೀ ಚಿಕ್ಕಮ್ಮದೇವಿ ದೇವಾಲಯಗಳಲ್ಲಿಯೂ ವಿಶೇಷ ಪೂಜಾ ಕೈಂಕರ್ಯ ಜರುಗಿದವು. ರಥೋತ್ಸವದ ಬಳಿಕ ವಡ್ಡರಹಳ್ಳಿ ಗ್ರಾಮಸ್ಥರಿಂದ ವಸಂತೋತ್ಸವ ನಡೆಯಿತು. ಅವಭೃತಾಮೃತ ಮತ್ತು ಅಶ್ವಾರೋಹಣ ಸೇವೆ ನಂತರ ದೇವಿಯನ್ನು ಕಟ್ಟೆಮನೆ ಚಿಣ್ಯದ ಮೂಲಸ್ಥಾನಕ್ಕೆ ಕರೆದೊಯ್ಯಲಾಯಿತು. ಆ ಮೂಲಕ ಕಳೆದ ಹತ್ತು ದಿನಗಳಿಂದ ನಡೆದ ಜಾತ್ರಾಮಹೋತ್ಸವಕ್ಕೆ ತೆರೆಬಿದ್ದಿತು.