ಸೋಮನಪುರದಲ್ಲಿ ಮೇಕೆಯನ್ನು ಎಳೆದೊಯ್ದ ಹುಲಿ

19-SEP-GPT-1
Published on

ಗುಂಡ್ಲುಪೇಟೆ: ತಾಲೂಕಿನ ಸೋಮನಪುರ ಗ್ರಾಮದಲ್ಲಿ ಹಾಡಹಗಲೇ ಜನರೆದುರಿಗೆ ಮೇಕೆಯನ್ನು ಎಳೆದೊಯ್ದ ಹುಲಿ ಪತ್ತೆಗೆ ಅರಣ್ಯ ಇಲಾಖೆ ಕೂಂಬಿಂಗ್ ನಡೆಸಿದರೂ ಯಾವುದೇ ಸುಳಿವು ಸಿಗದಿರುವುದು ಗ್ರಾಮಸ್ಥರನ್ನು ಆತಂಕಕ್ಕೀಡು ಮಾಡಿದೆ.

ಗುರುವಾರ ಮಧ್ಯಾಹ್ನ ಗ್ರಾಮದ ಹೊರವಲಯದಲ್ಲಿ ಹುಲಿಕೆರೆ ಸಮೀಪ ಗುರುಸಿದ್ದಶೆಟ್ಟಿ ಮೇಕೆಗಳನ್ನು ಮೇಯಿಸುತ್ತಿದ್ದಾಗ ಹುಲಿ ದಾಳಿ ನಡೆಸಿದೆ. ಹುಲಿಯನ್ನು ಕಂಡ ಕುರಿಗಾಹಿಗಳು ಹಾಗೂ ಅಕ್ಕಪಕ್ಕದ ಜಮೀನುಗಳಲ್ಲಿದ್ದ ರೈತರು ಜೋರಾಗಿ ಕೂಗಿಕೊಳ್ಳುತ್ತಿದ್ದಂತೆ ಹುಲಿ ಮೇಕೆಯನ್ನು ಕಚ್ಚಿಕೊಂಡು ಓಡಿಹೋಗಿದೆ.

ಬಫರ್ ವಲಯದ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲಿಸಿದರು. ರಾಂಪುರ ಸಾಕಾನೆ ಶಿಬಿರದ ಭಗೀರಥ ಆನೆಯನ್ನು ಕರೆತಂದು ಕೂಂಬಿಂಗ್ ನಡೆಸಿದರು. ಗ್ರಾಮಸ್ಥರ ಒತ್ತಾಯದ ಮೇರೆಗೆ ಅರಣ್ಯ ಇಲಾಖೆಯವರು ಹುಲಿಕೆರೆಯ ಸಮೀಪ ಬೋನು ಅಳವಡಿಸಿ ಅದರೊಳಗೆ ಸಂತ್ರಸ್ತ ಕುರಿಗಾಹಿಯ ಒಂದು ಮೇಕೆಯನ್ನು ಕೂಡಿಹಾಕಿದ್ದಾರೆ. ಕೂಂಬಿಂಗ್ ನಡೆಸಿದರೂ ಎಲ್ಲಿಯೂ ಹುಲಿಯ ಜಾಡು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಲಿ ಸೆರೆಗೆ ಒತ್ತಾಯ: ಕಳೆದ ಎರಡು, ಮೂರು ವರ್ಷಗಳಿಂದಲೂ ಈ ಭಾಗದಲ್ಲಿ ಹುಲಿಗಳು ಓಡಾಡುತ್ತಿದ್ದು, ಜಾನುವಾರುಗಳನ್ನು ಕೊಲ್ಲುತ್ತಿವೆ. ಕಳೆದ ವರ್ಷ ರವಿ ಅವರ ಬಾಳೆ ತೋಟದಲ್ಲಿ ಹುಲಿ ಕಾಣಿಸಿಕೊಂಡರೂ ಸೆರೆ ಹಿಡಿಯದೆ ಕಾಡಿಗಟ್ಟಿದ್ದಾರೆ. ಇದರಿಂದ ಹುಲಿಗಳು ಪದೇ ಪದೆ ಗ್ರಾಮಗಳ ಅಂಚಿನಲ್ಲಿಯೇ ಸುಳಿದಾಡುತ್ತಿವೆ. ರೈತರು ತಮ್ಮ ಜಮೀನುಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಕಾರ್ಮಿಕರು ಕೂಲಿ ಕೆಲಸಗಳಿಗೆ ಬರಲು ನಿರಾಕರಿಸುವುದರಿಂದ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಒಂದು ತಿಂಗಳ ಹಿಂದೆ ಬೊಮ್ಮಲಾಪುರದಲ್ಲಿ ಹುಲಿಯೊಂದು ಹಾಡಹಗಲೇ ಹಸುವನ್ನು ಕೊಂದಿದ್ದರೂ ಅರಣ್ಯ ಇಲಾಖೆ ಸೆರೆಹಿಡಿಯಲು ಗಂಭೀರ ಪ್ರಯತ್ನ ಮಾಡಿಲ್ಲ. ಈ ಬಗ್ಗೆ ಪ್ರಶ್ನಿಸಿದ ಗ್ರಾಮಸ್ಥರ ವಿರುದ್ಧ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಹುಲಿ ಸೆರೆ ಹಿಡಿಯಲು ಕ್ರಮಕೈಗೊಳ್ಳಬೇಕು ಎಂದು ಭಾರತೀಯ ಕಿಸಾನ್ ಸಂಘ ಒತ್ತಾಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net