

ಹುಬ್ಬಳ್ಳಿ : ಸಚಿವ ವಿ. ಸೋಮಣ್ಣ ನಮ್ಮ ಜತೆಗೇ ಇದ್ದಾರೆ. ಮುಂದೆಯೂ ಬಿಜೆಪಿಯೊಂದಿಗೆ ಇರುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸೋಮಣ್ಣ ಮತ್ತು ನಾನು ಹಳೇಯ ಸ್ನೇಹಿತರು. ಭಾನುವಾರದಂದು ಹುಬ್ಬಳ್ಳಿಯಲ್ಲಿ ಅವರೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆದಿಲ್ಲ. ಅದೊಂದು ಔಪಚಾರಿಕ ಭೇಟಿ ಅಷ್ಟೇ ಎಂದರು.
ಕರ್ನಾಟಕದಲ್ಲಿ ಮೋದಿ ಸುನಾಮಿ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಅವರ ಭೇಟಿಯಿಂದಾಗಿ ಬಿಜೆಪಿ ಪರ ಒಲವು ಹೆಚ್ಚುತ್ತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಕ್ರೆಡೆಟ್ ಪಡೆದುಕೊಳ್ಳಲು ಪೈಪೋಟೆ ಹೆಚ್ಚುತ್ತಿದೆ. ಚುನಾವಣೆ ಸಂದರ್ಭದಲ್ಲಿ ಇದು ಸಹಜ. ಆದರೆ, ರಾಜ್ಯದ ಜನರಿಗೆ ನೈಜ ಸಂಗತಿ ಗೊತ್ತಿದೆ. ಪಕ್ಕದ ಮನೆಯವಳು ಗಂಡು ಮಗುವಿಗೆ ಜನ್ಮ ನೀಡಿದರೆ ಕಾಂಗ್ರೆಸ್ನವರು ಪೇಡೆ ಹಂಚುವ ಕೆಲಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರನ್ನು ಟೀಕಿಸಿದರು.
ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಮುಷ್ಕರ ಕುರಿತು ಪ್ರತಿಕ್ರಿಯಿಸಿದ ಸಿಎಂ, ಇಂಧನ ಸಚಿವರು ಈಗಾಗಲೇ ಮುಷ್ಕರನಿರತರೊಂದಿಗೆ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ. ಮುಷ್ಕರ ಶೀಘ್ರ ಸುಖಾಂತ್ಯಗೊಳ್ಳುವ ಭರವಸೆ ಇದೆ ಎಂದು ತಿಳಿಸಿದರು.
ನರೇಂದ್ರ ಮೋದಿ ಅವರು ದೇವರೆಂದು ತಮ್ಮನ್ನು ತಿಳಿದುಕೊಂಡಿಲ್ಲ. ಅದು ಕಾಂಗ್ರೆಸ್ನವರ ಭಾವನೆ. ಮೋದಿ ಒಬ್ಬ ಮಹಾನ್ ನಾಯಕ. ಆಂತರಿಕ ಸುರಕ್ಷತೆ ತಂದು ದೇಶವನ್ನು ಸುಭದ್ರಗೊಳಿಸಿದ್ದಾರೆ ಎಂದರು.
ಫೈಟರ್ ರವಿಗೆ ಪ್ರಧಾನಿ ನಮಸ್ಕರಿಸಿದ್ದಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ ಬೊಮ್ಮಾಯಿ, ಸಾರ್ವಜನಿಕವಾಗಿ ಯಾರೇ ಎದುರಿಗೆ ಬಂದರೂ ಮೋದಿ ನಮಸ್ಕಾರ ಮಾಡುತ್ತಾರೆ ಎಂದಷ್ಟೇ ಹೇಳಿದರು.