ಸೋತರೂ ಕ್ಷೇತ್ರ ಕಡೆಗಣಿಸಲಿಲ್ಲ: ಸಚಿವ ಎಂಟಿಬಿ ನಾಗರಾಜ್ ಹೇಳಿಕೆ

06-Manjunath-HSK-01
Published on

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ಉಪಚುನಾವಣೆಯಲ್ಲಿ ಗೆಲುವಿನ ಅಂತರದಿಂದ ಹಿಂದೆ ಬಿದ್ದರೂ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಲ್ಲಿ ನಾನು ಹಿಂದೆ ಸರಿಯಲಿಲ್ಲ, ಎಂಎಲ್‌ಸಿ ಆಗಿ, ಮಂತ್ರಿ ಪದವಿ ಪಡೆದು ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದು ಸಚಿವ ಎಂಟಿಬಿ ನಾಗರಾಜ್ ಹೇಳಿದರು.
ಅನುಗೊಂಡನಹಳ್ಳಿ ಹೋಬಳಿಯ ಕಲ್ಕುಂಟೆ ಅಗ್ರಹಾರದಲ್ಲಿ ಸೋಮವಾರ ವಿವಿಧ ಅಬಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಕ್ಷೇತ್ರದಲ್ಲಿ ನನ್ನ 18 ವರ್ಷ ಅಧಿಕಾರ ಅವಧಿಯಲ್ಲಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ನನ್ನ ರಾಜಕೀಯ ಜೀವನದಲ್ಲಿ ಪಕ್ಷ ಭೇದ ಮರೆತು ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದೇನೆ ಎಂದ ಅವರು ಮರು ಚುನಾವಣೆಯ ಸೋಲಿಗೆ ಕೆಲವರ ಷಡ್ಯಂತ್ರವೇ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ಕೇವಲ ಅಧಿಕಾರಕ್ಕಾಗಿ ಅಂಟಿಕೊಳ್ಳದೆ ನನಗೆ ರಾಜಕೀಯವಾಗಿ ಜನ್ಮ ಕೊಟ್ಟ ಕ್ಷೇತ್ರದ ಅಭಿವೃದ್ಧಿಗೆ ದೃಢ ಸಂಕಲ್ಪ ತೊಟ್ಟು ಸರ್ಕಾರದಿಂದ ವಿಶೇಷ ಅನುದಾನ ತರುವ ಮೂಲಕ ಪ್ರತಿ ಗ್ರಾಮಗಳ ಅಭಿವೃದ್ಧಿಗೆ ಮುಂದಾಗಿದ್ದೇನೆ ಎಂದರು.


ಜನರಿಗೆ ತಪ್ಪಿನ ಅರಿವಾಗಿದೆ:
ಉಪ ಚುನಾವಣೆಯಲ್ಲಿ ಆದ ತಪ್ಪಿನ ಬಗ್ಗೆ ಸಾಕಷ್ಟು ಜನರಿಗೆ ಅರಿವಾಗಿದೆ, ಕ್ಷೇತ್ರದಲ್ಲಿ ಸಚಿವ ಎಂಟಿಬಿ ನಾಗರಾಜ್ ಸ್ಥಳೀಯ ಶಾಸಕರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿಯಲ್ಲಿ ತೊಡಗಿದ್ದಾರೆ ಎಂದು ಅನುಗೊಂಡನಹಳ್ಳಿ ಹೋಬಳಿ ಶಕ್ತಿ ಕೇಂದ್ರದ ಅಧ್ಯಕ್ಷ ಓಬಳಾಪುರ ಮಂಜುನಾಥ್ ಹೇಳಿದರು. ಪ್ರತಿ ಗ್ರಾಮಗಳಿಗೆ ತೆರಳಿ ಜನರ ಕಷ್ಟ ಆಲಿಸುವ ಮೂಲಕ ಸಚಿವರು ಸ್ಪಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net