ಸೋತ ಅವಿಶ್ವಾಸ, ವಿಶ್ವಾಸ ಗೆದ್ದ ಎಂ. ಚಂದ್ರೇಗೌಡ; ಹಾಸನ ನಗರಸಭೆ ಅಧ್ಯಕ್ಷರಾಗಿ ಮುಂದುವರಿಕೆ

28_HSN_03A
Published on

ಹಾಸನ: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಹಾಸನ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ ವಿರುದ್ಧದ ಅವಿಶ್ವಾಸ ನಿರ್ಣಯ ಮಂಡನೆ ಸೋಮವಾರ ನಡೆದು ಸ್ವಪಕ್ಷೀಯ ಅಧ್ಯಕ್ಷರ ವಿರುದ್ಧ ಜೆಡಿಎಸ್ ಸದಸ್ಯರು ಮಂಡಿಸಿದ ಅವಿಶ್ವಾಸಕ್ಕೆ ಸೋಲಾಗಿ, ಬಿಜೆಪಿ ಹಾಗೂ ಕಾಂಗ್ರೆಸ್ ಸಹಕಾರ ಹಾಗು ಬೆಂಬಲದೊಂದಿಗೆ ಎಂ. ಚಂದ್ರೇಗೌಡ ಅವರು ಗೆದ್ದು ಬೀಗಿದ್ದಾರೆ. ಈ ಮೂಲಕ ಜೆಡಿಎಸ್‌ಗೆ ತೀವ್ರ ಮುಖಭಂಗವಾಗಿದೆ.

ನಗರಸಭೆ ಉಪಾಧ್ಯಕ್ಷೆ ಹೇಮಲತಾ ಕಮಲ್‌ಕುಮಾರ್ ಅಧ್ಯಕ್ಷತೆಯಲ್ಲಿ ಕುವೆಂಪು ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ಪರವಾಗಿ 21 ಜನರು ಕೈ ಎತ್ತುವ ಮೂಲಕ ಚಂದ್ರೇಗೌಡರ ವಿರುದ್ಧ ಅವಿಶ್ವಾಸಕ್ಕೆ ಮತ ಹಾಕಿದರು. ನಂತರ ಚಂದ್ರೇಗೌಡರ ಪರವಾಗಿ 16 ಸದಸ್ಯರು ಬೆಂಬಲ ಸೂಚಿಸುವ ಮೂಲಕ ಚಂದ್ರೇಗೌಡ ಮತ್ತೊಮ್ಮೆ ಅಧ್ಯಕ್ಷರಾಗಿ ಮುಂದುವರಿಯಲು ಅನುವು ಮಾಡಿಕೊಟ್ಟರು.

ಮಧ್ಯಾಹ್ನ 12.30ಕ್ಕೆ ಸಭೆ ಆರಂಭವಾಗಬೇಕಿತ್ತು. ಚಂದ್ರೇಗೌಡ ಅವರು ಬಿಜೆಪಿ ಸದಸ್ಯರು ಮತ್ತು ಸಂಸದರೊಂದಿಗೆ ಕಾಂಗ್ರೆಸ್ ಸದಸ್ಯರು ಆಗಮಿಸಿದರು. ಆದರೆ ಜೆಡಿಎಸ್ ಸದಸ್ಯರು ಬರಲು ತಡ ಮಾಡಿದ್ದರಿಂದ ಬಿಜೆಪಿ ಸದಸ್ಯರು ಆಯುಕ್ತ ರಮೇಶ್‌ಕುಮಾರ್ ಅವರಿಗೆ ಸಭಾಂಗಣದ ಬಾಗಿಲನ್ನು ಮುಚ್ಚುವಂತೆ ಮನವಿ ಮಾಡಿದರು. ಆದರೆ ಆಯುಕ್ತರು ಸಭೆ ನಿಗದಿಯಾದ ಸಮಯಕ್ಕಿಂತ ಅರ್ಧ ಗಂಟೆ ಅವಕಾಶ ಇರುತ್ತದೆ ಎಂದು ಹೇಳಿದರು. 12.45ಕ್ಕೆ ಎಲ್ಲ ಸದಸ್ಯರು ಆಗಮಿಸಿದ ನಂತರ ಉಪಾಧ್ಯಕ್ಷೆ ಹೇಮಲತಾ ಅವರ ಅಧ್ಯಕ್ಷತೆಯಲ್ಲಿ ಸಭೆ ಆರಂಭಗೊಂಡಿತು. ಸಭೆ ಆರಂಭವಾಗುತ್ತಿದ್ದಂತೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದವರಿಗೆ ಸಂತಾಪ ಸೂಚಿಸಲಾಯಿತು.

ನಂತರ ಅವಿಶ್ವಾಸ ಗೊತ್ತುವಳಿ ಸಭೆಯಲ್ಲಿ ವಿಶ್ವಾಸ ಮತ್ತು ಅವಿಶ್ವಾಸವನ್ನು ಮಂಡಿಸಲು ಉಪಾಧ್ಯಕ್ಷರು ಸೂಚನೆ ನೀಡಿದರು. ಅದರಂತೆ ಮೊದಲಿಗೆ ಚಂದ್ರೇಗೌಡರ ವಿರುದ್ಧ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಜೆಡಿಎಸ್‌ನ 16 ಸದಸ್ಯರು, ಶಾಸಕ ಸ್ವರೂಪ್ ಪ್ರಕಾಶ್, ಎಂಎಲ್‌ಸಿ ಸೂರಜ್ ರೇವಣ್ಣ ಹಾಗೂ ಕಾಂಗ್ರೆಸ್‌ನ ಸದಸ್ಯೆ ಎಚ್.ಎಂ.ವಿಜಯಾ, ಪಕ್ಷೇತರ ಸದಸ್ಯರಾದ ಅಲ್ಫಿಯಾ ಫಯಾಜ್, ಗೌಸಿಯಾ ಅಲ್ಮಾಸ್ ಅವರು ಜೆಡಿಎಸ್ ಪರವಾಗಿ ಕೈ ಎತ್ತುವ ಮೂಲಕ ಒಟ್ಟು 21 ಮತಗಳು ಅವಿಶ್ವಾಸಕ್ಕೆ ಚಲಾವಣೆಯಾದವು. ನಂತರ ಚಂದ್ರೇಗೌಡರ ಪರವಾಗಿ ವಿಶ್ವಾಸಕ್ಕೆ ಮತ ಚಲಾವಣೆಗೆ ಅವಕಾಶ ಮಾಡಿಕೊಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿಯ 13 ಸದಸ್ಯರು, ಸಂಸದ ಶ್ರೇಯಸ್ ಪಟೇಲ್, ಓರ್ವ ಕಾಂಗ್ರೆಸ್ ಸದಸ್ಯೆ ಮತ್ತು ಪಕ್ಷೇತರ ಸದಸ್ಯೆ ಮಂಗಳಾ ಪ್ರದೀಪ್ ಸೇರಿ ಒಟ್ಟು 16 ಮತಗಳನ್ನು ಪಡೆಯುವ ಮೂಲಕ ವಿಶ್ವಾಸವನ್ನು ಉಳಿಸಿಕೊಂಡರು. ಇದರೊಂದಿಗೆ ಅವಿಶ್ವಾಸ ನಿರ್ಣಯಕ್ಕೆ ಸೋಲಾಯಿತು.

ಸಭೆಯಲ್ಲಿ ಒಟ್ಟು 43 ಜನ ಭಾಗವಹಿಸಿದ್ದರು. ಅದರಲ್ಲಿ 5 ಜನ ನಾಮನಿರ್ದೇಶಿತ ಸದಸ್ಯರು ಕೂಡ ಭಾಗವಹಿಸಿದ್ದರು. ಆದರೆ ಅವರಿಗೆ ಮತದಾನದ ಹಕ್ಕಿರಲಿಲ್ಲ. ಉಳಿದ 38 ಜನ ಮತ ಚಲಾಯಿಸಲು ಅವಕಾಶವಿತ್ತು. ಇದರಲ್ಲಿ 26 ಜನ ಚಂದ್ರೇಗೌಡರನ್ನು ಕೆಳಗಿಳಿಸಲು ಮತ ಹಾಕಿದ್ದರೆ ಚಂದ್ರೇಗೌಡರು ಕೆಳಗಿಳಿಯಬೇಕಾಗಿತ್ತು. ಆದರೆ ಕೇವಲ 21 ಮತ ಪಡೆದುಕೊಂಡು ಜೆಡಿಎಸ್‌ಗೆ ಚಂದ್ರೇಗೌಡರನ್ನು ಕೆಳಗಿಳಿಸಲು ಸಾಧ್ಯವಾಗಲಿಲ್ಲ. ಆದರೆ ಜೆಡಿಎಸ್‌ನವರಿಗೆ ಸೆಟೆದು ನಿಂತ ಚಂದ್ರೇಗೌಡರು ವಿಪ್ ಜಾರಿಯಾಗಿದ್ದರಿಂದ ಮತ ಚಲಾಯಿಸದೆ ತಟಸ್ಥವಾಗಿದ್ದುಕೊಂಡು ಅಧ್ಯಕ್ಷ ಗಾದಿಯನ್ನು ಉಳಿಸಿಕೊಂಡರು.

ಮತದಾನದ ಬಳಿಕ ಉಪಾಧ್ಯಕ್ಷರು ಚಂದ್ರೇಗೌಡರು ವಿಶ್ವಾಸ ಉಳಿಸಿಕೊಂಡಿದ್ದಾರೆ ಎಂದು ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರು ಮೇಜು ಬಡಿದು ಸಂಭ್ರಮಿಸಿದರು. ಮಾಜಿ ಅಧ್ಯಕ್ಷ ಮೋಹನ್‌ಕುಮಾರ್ ಸಭೆಯಲ್ಲೇ ಮಾಜಿ ಶಾಸಕ ಪ್ರೀತಂಗೌಡ ಅವರಿಗೆ ಜೈಕಾರ ಹಾಕಿದರು. ನಂತರ ಜೆಡಿಎಸ್‌ನ ಸದಸ್ಯರೆಲ್ಲರೂ ಸಭೆಯಿಂದ ಹೊರ ನಡೆದರು. ಮತ್ತೆ ಅಧ್ಯಕ್ಷರಾಗಿ ಮುಂದುವರಿದ ಚಂದ್ರೇಗೌಡ ಅವರನ್ನು ಸಂಸದ ಶ್ರೇಯಸ್ ಪಟೇಲ್ ಮತ್ತು ಬಿಜೆಪಿಯ ಎಲ್ಲ ಸದಸ್ಯರು ಅಭಿನಂದಿಸಿ, ಶುಭ ಹಾರೈಸಿದರು. ಚಂದ್ರೇಗೌಡ ಮತ್ತು ಬಿಜೆಪಿ ಬೆಂಬಲಿಗರು ನಗರಸಭೆ ಹೊರಭಾಗದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ನಗರಸಭೆ ಕುವೆಂಪು ಸಭಾಂಗಣ ಮತ್ತು ಆವರಣದಲ್ಲಿ ಪ್ರೀತಂಗೌಡರಿಗೆ ಬಿಜೆಪಿ ಕಾರ್ಯಕರ್ತರು ಮತ್ತು ಸದಸ್ಯರು ಜೈಕಾರ ಹಾಕುತ್ತಿದ್ದರೆ, ಇತ್ತ ಜೆಡಿಎಸ್‌ನ ಸದಸ್ಯರು ಮತ್ತು ನಾಯಕರಿಗೆ ಮುಜುಗರ ಉಂಟಾಗುತ್ತಿತ್ತು. ಅವಿಶ್ವಾಸ ಸಭೆ ನಡೆದು ಚಂದ್ರೇಗೌಡರು ಗೆಲುವು ಸಾದಿಸುತ್ತಿದ್ದಂತೆ ಬಿಜೆಪಿಯ ಸದಸ್ಯರು ಸಭೆಯಲ್ಲೇ ಪ್ರೀತಂಗೌಡರಿಗೆ ಜೈಕಾರ ಹಾಕಿದರು. ಈ ಸಂದರ್ಭದಲ್ಲಿ ಸಭೆಯಲ್ಲಿದ್ದಂತಹ ಎಂಎಲ್‌ಸಿ ಸೂರಜ್ ರೇವಣ್ಣ ಹಾಗೂ ಶಾಸಕ ಎಚ್.ಪಿ.ಸ್ವರೂಪ್ ಅವರು ಮೌನಕ್ಕೆ ಶರಣಾಗಿದ್ದರು.

ಇಡೀ ದೇಶದಲ್ಲಿ ಬಿಜೆಪಿ - ಕಾಂಗ್ರೆಸ್ ಆರೋಪ-ಪ್ರತ್ಯಾರೋಪದಲ್ಲಿ ಕಚ್ಚಾಡುತ್ತಿದ್ದರೆ ಹಾಸನ ನಗರಸಭೆಯಲ್ಲಿ ಮಾತ್ರ ಬಿಜೆಪಿ- ಕಾಂಗ್ರೆಸ್ ಸದಸ್ಯರು ಸೇರಿಕೊಂಡು ಜೆಡಿಎಸ್‌ಗೆ ತಿರುಗೇಟು ನೀಡಿದ್ದಾರೆ. ಇದು ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಎನ್‌ಡಿಎ ಸರ್ಕಾರದಲ್ಲಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಿದ್ದಾರೆ. ಆದರೆ ಹಾಸನ ನಗರಸಭೆಯಲ್ಲಿ ಮೈತ್ರಿ ಧರ್ಮ ಪಾಲನೆಯಾಗದೆ ತೀವ್ರ ಮುಖಭಂಗ ಅನುಭವಿಸಿದೆ.

ಈ ಗೆಲುವಿಗೆ ಬಿಜೆಪಿಯ ಪ್ರೀತಂ ಗೌಡ ಮತ್ತು ಸಂಸದ ಶ್ರೇಯಸ್ ಪಟೇಲ್‌ರ ಬೆಂಬಲವೇ ಕಾರಣ. ನಾನು ಯಾವುದೇ ಅವ್ಯವಹಾರ, ಅನೈತಿಕ ಚಟುವಟಿಕೆಯಲ್ಲಿ ತೊಡಗಿಲ್ಲ. ಕಪ್ಪು ಚುಕ್ಕೆ ಬಾರದಂತೆ ಆಡಳಿತ ನಡೆಸಿದ್ದೇನೆ. ಜೆಡಿಎಸ್ ಸದಸ್ಯರಿಗೆ ಪಕ್ಷದಿಂದ ವಿಪ್ ಜಾರಿಯಾಗಿತ್ತು. ಆದರೆ ಮಾನಸಿಕವಾಗಿ ಅವರು ನನ್ನ ಪರವೇ ಇದ್ದರು. ಹೀಗಾಗಿ ಪ್ರೀತಂ ಗೌಡ ಮತ್ತು ಶ್ರೇಯಸ್ ಪಟೇಲ್‌ರ ಮೊರೆ ಹೋದೆ. ಹಾಸನಾಂಬೆ ದೇವಿ ಮತ್ತು ಕೊಲ್ಲಾಪುರದ ದೇವಿಯ ಆಶೀರ್ವಾದದಿಂದ ಕೆಂಡದ ಹಾದಿಯಲ್ಲಿ ಜಯಶಾಲಿಯಾಗಿದ್ದೇನೆ. ಇನ್ಮುಂದೆ ಪ್ರೀತಂ ಗೌಡ ಮತ್ತು ಶ್ರೇಯಸ್ ಪಟೇಲ್ ಸೂಚಿಸಿದ ಮಾರ್ಗದಲ್ಲಿ ಹಾಸನವನ್ನು ಉತ್ತಮ ನಗರವಾಗಿ ರೂಪಿಸುತ್ತೇನೆ ಎಂದು  ಎಂ. ಚಂದ್ರೇಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net