

ತರೀಕೆರೆ: ಸೋಂಪುರ ಗ್ರಾಮದ ತ್ರಿಮೂರ್ತಾತ್ಮಕ ಶ್ರೀ ಪ್ರಸನ್ನ ಸೋಮೇಶ್ವರ ಸ್ವಾಮಿ ರಥೋತ್ಸವ ಮಂಗಳವಾರ ವೈಭವದಿಂದ ನಡೆಯಿತು.
ಬೆಳಗಿನಜಾವ ದೇಗುಲದಲ್ಲಿ ರಥ ಬಲಿ, ಘಟಕಾಪೂಜೆ, ಸ್ವಾಮಿ ಪ್ರಾರ್ಥನೆ, ಮಂಗಳಾಷ್ಟಕ ಪೂರ್ವಕ ರಥಾರೋಹಣ, ಮೂಲ ದೇವರಿಗೆ ವಿವಿಧ ಅಭಿಷೇಕ ನೆರವೇರಿಸಲಾಯಿತು. ವಿವಿಧ ಹೂವುಗಳಿಂದ ಅಲಂಕಾರಗೊಳಿಸಿದ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿ ಮಾಡಲಾಯಿತು.
ವಿವಿಧ ಧಾರ್ಮಿಕ ಕಾರ್ಯ ನೆರವೇರಿಸಿದ ಬಳಿಕ ಶ್ರೀ ಪ್ರಸನ್ನ ಸೋಮೇಶ್ವರ ಸ್ವಾಮಿ ಉತ್ಸವಮೂರ್ತಿಯನ್ನು ವಾದ್ಯಗೋಷ್ಠಿಯೊಂದಿಗೆ ದೇಗುಲದ ಸುತ್ತ ಮೆರವಣಿಗೆ ನಡೆಸಿ ರಥಾರೋಹಣ ಮಾಡಲಾಯಿತು. ಜಯ ಘೋಷ ಮೊಳಗಿಸಿದ ಭಕ್ತರು ಮಧ್ಯಾಹ್ನ 12.45ರ ಹೊತ್ತಿಗೆ ತೇರು ಎಳೆದರು.
ತರೀಕೆರೆ, ಲಕ್ಕವಳ್ಳಿ, ಮಾಳಿಕೊಪ್ಪ, ಕೆಂಚಿಕೊಪ್ಪ, ಹಲಸೂರು, ಕರಕುಚ್ಚಿ, ಬಾವಿಕೆರೆ, ರಂಗೇನಹಳ್ಳಿ, ಬರಗೇನಹಳ್ಳಿ ಇತರ ಕಡೆಗಳಿಂದ ಆಗಮಿಸಿದ್ದ ಭಕ್ತರು ರಥದ ಮೇಲೆ ನಿಂಬೆ ಹಣ್ಣು, ಬಾಳೆ ಹಣ್ಣು, ಹೂವು, ಮಂಡಕ್ಕಿ, ಪೂಜಾ ಸಾಮಗ್ರಿ ತೂರುವ ಮೂಲಕ ಹರಕೆ ತೀರಿಸಿದರು.
ಸಂಜೆ ರಥಾವರೋಹಣದ ನಂತರ ಪಲ್ಲಕ್ಕಿ ಉತ್ಸವ, ಭೂತಬಲಿ, ದಿವ್ಯ ಶಯನೋತ್ಸವ ಅಷ್ಟಾವಧಾನ ಸೇವೆ, ಮಹಾ ಮಂಗಳಾರತಿ ನೆರವೇರಿದವು. ಶಾಸಕ ಜಿ.ಎಚ್.ಶ್ರೀನಿವಾಸ್, ಮಾಜಿ ಶಾಸಕ ಡಿ.ಎಸ್.ಸುರೇಶ್ ದೇವರ ದರ್ಶನ ಪಡೆದರು.