ಸೋಂಕು ಹೆಚ್ಚಾದರೆ ಕಂಟೇನ್ಮೆಂಟ್, ಜಿಲ್ಲಾ ಕೋವಿಡ್ ಹಾಗೂ ಪ್ರಕೃತಿ ವಿಕೋಪ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಸೂಚನೆ, 3ನೇ ಅಲೆ ನಿಯಂತ್ರಣ ಕುರಿತ ಸಭೆ

5a3a1729-c93e-4c58-a529-7b0037fdc8d4
Published on

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ಕರೊನಾ ಸೋಂಕು ಪ್ರಕರಣಗಳು ಹೆಚ್ಚಾದರೆ ಕೂಡಲೇ ಕಂಟೇನ್ಮೆಂಟ್ ಹಾಗೂ ಸೆಮಿ ಕಂಟೇನ್ಮೆಂಟ್ ವಲಯಗಳಾಗಿ ವಿಂಗಡಿ ಪರಿಣಾಮಕಾರಿಯಾಗಿ ಸೋಂಕು ನಿಯಂತ್ರಿಸಬೇಕು ಎಂದು ಗ್ರಾಮಾಂತರ ಜಿಲ್ಲಾ ಕೋವಿಡ್-19 ಹಾಗೂ ಪ್ರಕೃತಿ ವಿಕೋಪ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್ ಸೂಚಿಸಿದರು.

ದೇವನಹಳ್ಳಿ ತಾಲೂಕಿನ ಜಿಪಂ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕೋವಿಡ್ 3ನೇ ಅಲೆ ನಿಯಂತ್ರಣ ಕುರಿತ ಸಭೆಯಲ್ಲಿ ಮಾತನಾಡಿದರು. ಸೋಂಕು ನಿಯಂತ್ರಣಕ್ಕೆ ಸರ್ಕಾರದ ನಿರ್ದೇಶನಗಳನ್ನು ಎಲ್ಲರೂ ತಪ್ಪದೆ ಪಾಲಿಸಬೇಕು ಎಂದರು.

ದೇವರ ದರ್ಶನಕ್ಕಷ್ಟೇ ಅವಕಾಶ: ಸಂತೆ, ಮದುವೆ, ಮಾರುಕಟ್ಟೆಗಳು, ಜಾತ್ರೆಗಳು, ಬ್ರಹ್ಮ ರಥೋತ್ಸವ, ಕರಗ ಮಹೋತ್ಸವ ಸೇರಿ ಜನಸಂದಣಿ ಸ್ಥಳಗಳಲ್ಲಿ ಮಾರ್ಗಸೂಚನೆ ಪಾಲನೆಯಾಗಬೇಕು. ಪ್ರತಿ ತಾಲೂಕಿನಲ್ಲಿ ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ಕರೆದು ಆಯಾ ವ್ಯಾಪ್ತಿಯ ದೇವಸ್ಥಾನ, ಮಸೀದಿ ಹಾಗೂ ಚರ್ಚ್ ಹಾಗೂ ಪ್ರಾರ್ಥನಾ ಮಂದಿರದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಬೇಕು ಹಾಗೂ ದೇವಾಲಯಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಬೇಕು ಎಂದು ಎಂಟಿಬಿ ತಿಳಿಸಿದರು.

ತಾಲೂಕು ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಜಿಲ್ಲೆಯಲ್ಲಿ ಇದುವರೆಗೂ 4.95 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದ್ದು, ಹೆಚ್ಚಿನ ಕೋವಿಡ್ ಲಸಿಕೆ ಪೂರೈಸುವಂತೆ ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ನೀರಿಗೆ ಆದ್ಯತೆ: ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಜಿಲ್ಲೆಯ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಪಂಗಳು ಕಾರ್ಯ ನಿರ್ವಹಿಸಬೇಕು. ಕುಡಿಯುವ ನೀರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಗುವುದು ಎಂದು ಎಂಟಿಬಿ ತಿಳಿಸಿದರು.

ಶೇ 1.81 ಪಾಸಿಟಿವಿಟಿ ದರ: ಮೂರನೇ ಅಲೆ ತಡೆಯಲು ಜಿಲ್ಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಕೈಗಾರಿಕಾ ಕೇಂದ್ರ ಸೇರಿ ಜನಸಂದಣಿ ಪ್ರದೇಶದಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಳ ಮಾಡಲಾಗುವುದು ಪ್ರಸ್ತುತ ಜಿಲ್ಲೆಯಲ್ಲಿ 392 ಸಕ್ರಿಯ ಪ್ರಕರಣಗಳಿದ್ದು, ಶೇ 1.81 ಪಾಸಿಟಿವಿಟಿ ದರವಿದೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ತಿಳಿಸಿದರು.

ಹೊಸಕೋಟೆ ಹಾಗೂ ನೆಲಮಂಗಲ ತಾಲೂಕಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಿದ್ದು, ಸೋಂಕು ಉಲ್ಬಣಗೊಂಡರೆ ಕಂಟೇನ್ಮೆಂಟ್ ಹಾಗೂ ಸೆಮಿ ಕಂಟೇನ್ಮೆಂಟ್ ವಲಯಗಳಾಗಿ ಗುರುತಿಸಲಾಗುವುದು ಎಂದು ತಿಳಿಸಿದರು.

ಹೆಚ್ಚಿನ ಅನುದಾನ ಬೇಕು: ಜಿಲ್ಲೆಯಲ್ಲಿ 13 ಗ್ರಾಮಗಳಿಗೆ ಟ್ಯಾಂಕರ್ ಮೂಲಕ, 30 ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಹೆಚ್ಚುವರಿ ಅನುದಾನದ ಅವಶ್ಯಕತೆ ಇದೆ ಎಂದು ಜಿಪಂ ಸಿಇಒ ಎಂ.ಆರ್.ರವಿಕುಮಾರ್ ತಿಳಿಸಿದರು.

5 ಲಕ್ಷ ರೂ.ಚೆಕ್ ವಿತರಣೆ: ನೆಲಮಂಗಲ ತಾಲೂಕಿನ ಬಿನ್ನಮಂಗಲದಲ್ಲಿ ಇತ್ತೀಚೆಗೆ ಮಳೆಯಿಂದಾಗಿ ಮನೆ ಗೋಡೆ ಕುಸಿದು ಮೃತಪಟ್ಟ ಎರಡು ಕುಟುಂಬದ ಸದಸ್ಯರಿಗೆ ತಲಾ ರೂ. 5 ಲಕ್ಷ ರೂ.ಪರಿಹಾರದ ಚೆಕ್ಕನ್ನು ಎಂಟಿಬಿ ನಾಗರಾಜ್ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net