ಸೋಂಕು ಹರಡದಂತೆ ಕ್ರಮ ಕೈಗೊಳ್ಳಿ

1703klb12
Published on

ಕಲಬುರಗಿ: ಪ್ರಾದೇಶಿಕ ಆಯುಕ್ತ ಡಾ.ಎನ್.ವಿ. ಪ್ರಸಾದ್ ಗುರುವಾರ ಜನದಟ್ಟಣೆ ಪ್ರದೇಶಗಳಾದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಶರಣಬಸವೇಶ್ವರ ದೇವಸ್ಥಾನ ಹಾಗೂ ಖ್ವಾಜಾ ಬಂದಾನವಾಜ್ ದರ್ಗಾ ಇತರ ಕಡೆ ಭೇಟಿ ನೀಡಿ ಕರೊನಾ ಸೋಂಕು ತಡೆಗೆ ಕೈಗೊಂಡಿರುವ ಮುಂಜಾಗ್ರತಾ ಕ್ರಮ ಕುರಿತು ಪರಿಶೀಲನೆ ನಡೆಸಿದರು.
ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರನ್ನು ಸೋಂಕು ಪರೀಕ್ಷೆಗೆ ಒಳಪಡಿಸುವುದನ್ನು ತೀವ್ರಗೊಳಿಸಬೇಕು. ಥರ್ಮಲ್ ಸ್ಕ್ಯಾನ್ ವ್ಯವಸ್ಥೆ ಕಡ್ಡಾಯಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಉಪ ಆಯುಕ್ತರಿಗೆ ಸೂಚಿಸಿದ್ದಾರೆ.
ಮಹಾನಗರ ಪಾಲಿಕೆಯಿಂದ ನಗರದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯೀಕರಣ ಕಾರ್ಯ ನಡೆಯುತ್ತಿದ್ದರೂ ಸಾಕಷ್ಟು ಲೋಪದೋಷ ಕಂಡು ಬಂದಿವೆ. ಸಂಬಂಧಿತ ಅಧಿಕಾರಿಗಳು ನಿಗಾ ವಹಿಸಿ ಯಾವುದೇ ಲೋಪದೋಷ ಆಗದಂತೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು. ನಗರದ ಪ್ರಮುಖ ಸ್ಥಳಗಳಲ್ಲಿ ವೈರಸ್ ತಡೆಯುವಿಕೆ ದೃಷ್ಟಿಯಿಂದ ಔಷಧ ಸಿಂಪಡಣೆ ಚುರುಕುಗೊಳಿಸಬೇಕು. ಅಗತ್ಯವಿರುವ ಸ್ಥಳಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಮಾಡಬೇಕೆಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದ್ದಾರೆ.
ಗುಲ್ಬರ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಜಿಮ್ಸ್) ಆಸ್ಪತ್ರೆ ಐಸೋಲೇಷನ್ ವಾಡರ್್ನಲ್ಲಿರುವವರಿಗೆ ಪೂರೈಸುತ್ತಿರುವ ಊಟದ ವ್ಯವಸ್ಥೆ ಸುಧಾರಿಸಬೇಕು. ಪೌಷ್ಟಿಕ ಆಹಾರಕ್ಕೆ ಕ್ರಮ ಜರುಗಿಸಬೇಕು. ವೆಂಟಿಲೇಟರ್ ವ್ಯವಸ್ಥೆ ಅಧಿಕಗೊಳಿಸಬೇಕೆಂದು ಜಿಮ್ಸ್ ನಿರ್ದೆಶಕರಿಗೆ ತಿಳಿಸಿದ್ದಾರೆ. ಸಂಬಂಧಿತ ಅಧಿಕಾರಿಗಳು ಕೈಗೊಂಡ ಕ್ರಮಗಳ ಕುರಿತು ವರದಿ ಸಲ್ಲಿಸಬೇಕೆಂದು ಸೂಚಿಸಿದ್ದಾರೆ.


ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ತಪಾಸಣೆ ವ್ಯವಸ್ಥೆ ಇಲ್ಲದಿರುವುದು ಕಂಡಿದೆ. ಬಸ್ ನಿಲ್ದಾಣದಲ್ಲಿ ಪ್ರತ್ಯೇಕವಾಗಿ ಒಳ ಮತ್ತು ಹೊರಪ್ರವೇಶ ದ್ವಾರಗಳನ್ನು ತಾತ್ಕಾಲಿಕವಾಗಿ ಸ್ಥಾಪಿಸಿ ಪ್ರತಿಯೊಬ್ಬ ಪ್ರಯಾಣಿಕನ ತಪಾಸಣೆ ಮಾಡಬೇಕು.
| ಎನ್.ವಿ. ಪ್ರಸಾದ್
ಪ್ರಾದೇಶಿಕ ಆಯುಕ್ತ ಕಲಬುರಗಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net