

ವಾದಿರಾಜ ವ್ಯಾಸಮುದ್ರ ಕಲಬುರಗಿ: ನವದೆಹಲಿ ನಿಜಾಮುದ್ದೀನ್ ಮರ್ಕಜ್ನಲ್ಲಿ ನಡೆದ ತಬ್ಲಿಘಿ ಜಮಾತ್ ಸಂಘಟನೆ ಧಾರ್ಮಿಕ ಸಭೆಯ ಕರೊನಾ ನಂಜು ಪರೋಕ್ಷವಾಗಿ ಕಲಬುರಗಿಯನ್ನು ಪೆಡಂಭೂತದಂತೆ ಕಾಡುತ್ತಿದೆ. ಸೋಮವಾರ ಪತ್ತೆಯಾಗಿರುವ ಐದು ಸೋಂಕಿತ ಪ್ರಕರಣಗಳಲ್ಲಿ 4ಕ್ಕೆ ಪರೋಕ್ಷವಾಗಿ ತಬ್ಲಿಘಿ ಲಿಂಕ್ ಇರೋದು ಖಚಿತವಾಗಿದೆ.
ಇದುವರೆಗೆ ವರದಿಯಾದ 27 ಪಾಸಿಟಿವ್ ಪ್ರಕರಣಗಳಲ್ಲಿ ಕೆಲವು ತಬ್ಲಿಘಿ ಸಭೆಗೆ ಹೋಗಿ ಬಂದವರ ಸಂಪರ್ಕಕ್ಕೆ ಬಂದವರಿಂದಲೇ ಆಗಿರುವುದು ತಲ್ಲಣ ಮೂಡಿಸಿದೆ. ಸೋಂಕಿನಿಂದ ಮೃತಪಟ್ಟಿರುವ ಇಬ್ಬರು ವ್ಯಾಪಾರಿಗಳಿಗೆ ತಬ್ಲಿಘಿಗಳ ಸಂಪರ್ಕವಿತ್ತು ಎನ್ನಲಾಗಿದೆ. ಇಂದಿನ ಐದು ಪ್ರಕರಣಗಳಲ್ಲಿ ನಾಲ್ಕು ಈ ಇಬ್ಬರಿಗೆ ಸಂಬಂಧಿಸಿವೆ. ಇವರೆಲ್ಲರನ್ನೂ ಇಎಸ್ಐ ಆಸ್ಪತ್ರೆಯ ಐಸೋಲೇಷನ್ ವಾರ್ಡ್ಗೆ ಸೇರಿಸಲಾಗಿದೆ.
ಒಂದು ವರ್ಷದ ಮಗುವಿನಿಂದ ಹಿಡಿದು 19 ವರ್ಷದ ಯುವಕರಿಗೆ ತಗುಲಿರುವ ಕರೊನಾ ಸೋಂಕು ಅವರ ಕುಟುಂಬಗಳನ್ನು ಆತಂಕಕ್ಕೆ ದೂಡಿದೆ. ತಬ್ಲಿಘಿ ಸಭೆಗೆ ಹೋಗಿ ಬಂದ ನಂತರ ಜಿಲ್ಲಾಡಳಿತ ಪತ್ತೆ ಹಚ್ಚಿರುವ ಎಲ್ಲ 26 ವ್ಯಕ್ತಿಗಳಲ್ಲಿ ಯಾವುದೇ ರೀತಿಯ ಸೋಂಕು ಕಂಡು ಬಂದಿಲ್ಲ. ಆದರೆ ಅವರ ಸಂಪರ್ಕಕ್ಕೆ ಬಂದವರಿಗೆ ಸೋಂಕು ತಗುಲುತ್ತಿರುವುದು ಭಯಕ್ಕೆ ಕಾರಣವಾಗಿದೆ.
ಸೋಂಕಿತರ ಜತೆ ಪ್ರೈಮರಿ ಮತ್ತು ಸೆಕೆಂಡರಿ ಸಂಪರ್ಕಕ್ಕೆ ಬಂದವರ ಸಂಖ್ಯೆಯೂ ಕ್ರಮೇಣ ಹೆಚ್ಚಾಗುತ್ತಿರುವುದು ಭಯವನ್ನು ಇಮ್ಮಡಿಗೊಳಿಸಿದೆ. ಪ್ರೈಮರಿ ಸಂಖ್ಯೆಯಲ್ಲಿ ಏನಾದರೂ ಪಾಸಿಟಿವ್ ಬಂದರೆ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಲಕ್ಷಣಗಳಿವೆ.
ಅನ್ಯ ರಾಜ್ಯದಿಂದ ಬಂದವರು
ಕಲಬುರಗಿ ಜಿಲ್ಲೆಗೆ ಬಂದ ವಿದೇಶಿಗರ ಸಂಖ್ಯೆ 488 ಇದ್ದರೆ, ನೆರೆ ರಾಜ್ಯ ಮತ್ತು ಬೆಂಗಳೂರಿನಿಂದ ಬಂದವರ ಸಂಖ್ಯೆ 1,24,147. ಕರೊನಾದಿಂದ ತತ್ತರಿಸುತ್ತಿರುವ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದವರ ಸಂಖ್ಯೆ 51,216. ಇದರಲ್ಲಿ ಸೇಡಂ ತಾಲೂಕಿಗೆ ಬಂದವರು 25,608, ಚಿತ್ತಾಪುರಕ್ಕೆ 10,001 ಬಂದಿದ್ದಾರೆ. ಸೇಡಂ ತಾಲೂಕಿಗೆ ಅನ್ಯ ರಾಜ್ಯ ಮತ್ತು ಅನ್ಯ ಕಡೆಗಳಿಂದ ಬಂದವರ ಸಂಖ್ಯೆ 62,058 ಇದೆ.
ಇದುವರೆಗಿನ ಅತಿ ಹೆಚ್ಚು ಪ್ರಕರಣ
ಸೋಮವಾರ ಬೆಳಗ್ಗಿನ ಹೆಲ್ತ್ ಬುಲೆಟಿನ್ ಬಿಡುಗಡೆಯಲ್ಲಿ ಐದು ಪ್ರಕರಣ ದೃಢಪಟ್ಟಿದ್ದು, ಈ ಎಲ್ಲ ಕಲಬುರಗಿಗೆ ಸೇರಿದ್ದವಾಗಿವೆ. ಇದುವರೆಗಿನ ಅಂಕಿ-ಅಂಶ ಗಮನಿಸಿದರೆ ಸೋಮವಾರವೇ ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿವೆ. ಘಾಟಗೆ ಲೇಔಟ್ನ ಕರೊನಾ ಸೋಂಕಿತ ವ್ಯಕ್ತಿ ದೆಹಲಿಯಿಂದ ಬಂದವರು. ಅವರು ಸರ್ಕಾರದ ಉದ್ಯೋಗಿಯಾಗಿದ್ದು, ಜ್ವರ ಬಂದಾಗ ಸ್ವತಃ ವೈದ್ಯರ ಬಳಿ ಹೋಗಿ ತೋರಿಸಿದಾಗ ಸೋಂಕು ತಗುಲಿರುವುದು ಖಚಿತವಾಗಿದೆ. ಕಲಬುರಗಿಯಲ್ಲಿ ಅವರೊಬ್ಬರೇ ಇರುತ್ತಿದ್ದರು ಎನ್ನಲಾಗಿದೆ.
ಇನ್ನಷ್ಟು ಕಠಿಣ ಕ್ರಮ ಬೇಕು
ಸೋಮವಾರ ಒಮ್ಮೆಲೆ ಐದು ಪಾಸಿಟಿವ್ ವರದಿ ಬಂದಿದ್ದನ್ನು ನೋಡಿದರೆ ರೆಡ್ ಜೋನ್ನಲ್ಲಿರುವ ನಗರದಲ್ಲಿ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪೊಲೀಸ್ ಇಲಾಖೆಯವರು ಇಡೀ ದಿನ ನಗರದ ಎಲ್ಲ ಕಡೆ ನಿಗಾ ವಹಿಸಿ ವಾಹನ ಸಂಚರಿಸದಂತೆ ನೋಡಿಕೊಳ್ಳುವ (ಅಗತ್ಯ ಸೇವೆ ಹೊರತುಪಡಿಸಿ) ತೀರ ಅಗತ್ಯವಿದೆ. ಮಹಾಮಾರಿಗೆ ಬ್ರೇಕ್ ಹಾಕಬೇಕೆಂದರೆ ಕಠಿಣ ಕ್ರಮ ಜರುಗಲೇಬೇಕು.