ಸೋಂಕು ತಡೆಗೆ ಮುಖಗವಸು ಕಡ್ಡಾಯ

MASK
Published on

ಯಾದಗಿರಿ: ಕರೊನಾ ಸೋಂಕು ನಿಯಂತ್ರಿಸಲು ಈವರೆಗೆ ಯಾವುದೇ ವೈದ್ಯಕೀಯ ಔಷಧಿ ಕಂಡುಕೊಳ್ಳದ ಕಾರಣ ಸಾರ್ವಜನಿಕರು ಮಾಸ್ಕ್ ಧರಿಸುವುದು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಗುಂಪುಗೂಡದೆ ಪರಸ್ಪರ ಅಂತರ ಕಾಪಾಡುವುದೇ ಸೂಕ್ತ ಪರಿಹಾರ ಎಂದು ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಸಲಹೆ ನೀಡಿದರು.

ನಗರದ ಗಾಂಧಿ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಸ್ಮೈಲ್ ಫೌಂಡೇಶನ್ ಆಶ್ರಯದಲ್ಲಿ ಶುಕ್ರವಾರ ಮಹಾತ್ಮಾ ಗಾಂಧೀಜಿ, ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ನಿಮಿತ್ತ ಸಾರ್ವಜನಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಿಸಿ ಮಾತನಾಡಿದ ಅವರು, ಮಾಸ್ಕ್ ಹಾಕಿಕೊಳ್ಳದೆ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ ಎಂದರು.

ನಗರಸಭೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗ್ರಾಪಂಗಳಲ್ಲಿ ಸೋಂಕು ನಿಯಂತ್ರಣದ ಬಗ್ಗೆ ಅಧಿಕಾರಿಗಳು ಜನರಿಗೆ ಅರಿವು ಮೂಡಿಸಬೇಕು. ಕೋವಿಡ್ ಸೋಂಕಿನ ಅಪಾಯದ ಕುರಿತು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಿ, ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳುವಂತೆ ಸೂಚಿಸಬೇಕು ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿನ ಜನತೆ ಅದರಲ್ಲೂ ವಿಶೇಷವಾಗಿ ವೃದ್ಧರು ಅಶಕ್ತರು ಈ ಸೋಂಕಿನ ಬಗ್ಗೆ ಎಚ್ಚರ ವಹಿಸಬೇಕು. ಎಲ್ಲೆಂದರಲ್ಲಿ ಹರಟೆ ಹೊಡೆಯುವುದು, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರದೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಬಹುಮುಖ್ಯವಾಗಿದೆ ಎಂದು ಕಿವಿಮಾತು ಹೇಳಿದರು.

ಜನರು ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುವುದು ನಿಷೇಧಿಸಿದೆ. ಸಾರ್ವಜನಿಕರು ಕಿರಾಣಿ ಅಂಗಡಿಗಳಲ್ಲಿ ದಿನಸಿ ವಸ್ತುಗಳನ್ನು ಖರೀದಿಸುವಾಗ ಪರಸ್ಪರ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸದ ವ್ಯಕ್ತಿಯು ಎರಡು ಮೂರು ಬಾರಿ ಸಿಕ್ಕಿಕೊಂಡರೆ ಅಂತವರ ವಿರುದ್ಧ ಪ್ರಕರಣ ಕೂಡ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net