

ಚಿಕ್ಕಮಗಳೂರು: ಕರೊನಾ ಎರಡನೇ ಅಲೆ ಗ್ರಾಮೀಣ .ಪ್ರದೇಶದಲ್ಲಿ ಹೆಚ್ಚು ಹರಡುತ್ತಿದೆ. ಹೀಗಾಗಿ ಸೋಂಕು ತಡೆಗೆ ಜನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜ್ ಹೇಳಿದರು. ತಾಪಂ ಸಭಾಂಗಣದಲ್ಲಿ ಕರೊನಾ ನಿಯಂತ್ರಣ ಸಂಬಂಧ ವೈದ್ಯರ ಜತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕರೊನಾ ನಿಯಂತ್ರಣ ಹಾಗೂ ಸೋಂಕಿತರನ್ನು ಪತ್ತೆಹಚ್ಚಿ ಸಕಾಲದಲ್ಲಿ ಚಿಕಿತ್ಸೆ ನೀಡಲು `ವೈದ್ಯರ ನಡೆ ಗ್ರಾಮಗಳ ಕಡೆ' ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು. ಗ್ರಾಮೀಣರಲ್ಲಿ ಕರೊನಾ ಪರೀಕ್ಷೆ ಹಾಗೂ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಬೇಕು. ತಾಲೂಕಿನಲ್ಲಿ ಸೋಂಕಿನ ಪ್ರಮಾಣ ಹೆಚ್ಚಿರುವ ಗ್ರಾಮಗಳನ್ನು ಗುರುತಿಸಬೇಕು. ಅಲ್ಲಿ ಹೊಸ ಪ್ರಕರಣಗಳು ದೃಢವಾದಲ್ಲಿ ಅಂಥವರನ್ನು ಹಾಗೂ ಪ್ರಾಥಮಿಕ ಸಂಪರ್ಕದಲ್ಲಿ ಇರುವವರನ್ನು ಪರೀಕ್ಷೆಗೆ ಒಳಪಡಿಸಬೇಕು. ಅವರಲ್ಲೂ ಸೋಂಕು ಕಂಡರೆ ತಕ್ಷಣ ಕರೊನಾ ಆರೈಕೆ ಕೇಂದ್ರಕ್ಕೆ ಕಳಿಸಬೇಕು ಎಂದು ಸೂಚಿಸಿದರು.
ತಪಾಸಣೆಗೆ ಮುಂದಾಗದೆ ಏರಿಕೆ:
ಹಳ್ಳಿಯ ಜನರು ಕರೊನಾ ಲಕ್ಷಣಗಳಿದ್ದರೂ ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸುತ್ತಿರುವುದರಿಂದ ಸೋಂಕಿನ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಸೋಂಕಿತನ ಸಂಪರ್ಕ ಹೊಂದಿರುವವರೂ ಸೇರಿ ಗ್ರಾಮದಲ್ಲಿರುವ ಎಲ್ಲರನ್ನೂ ಕಡ್ಡಾಯವಾಗಿ ಪರೀಕ್ಷೆಗೆ ಒಳಪಡಿಸಬೇಕು ಮತ್ತು ರ್ಯಾಪಿಡ್ ಆಂಟಿಜನ್ ಟೆಸ್ಟ್ ಹೆಚ್ಚಿಸಬೇಕು ಎಂದು ತಿಳಿಸಿದರು. ಜನರು ತಪಾಸಣೆ ಮಾಡಿಸಿಕೊಳ್ಳದಿದ್ದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿ ಬಲವಂತವಾಗಿ ತಪಾಸಣೆಗೆ ಒಳಪಡಿಸಲಾಗುವುದು. ಕರೊನಾ ಮೊದಲನೇ ಹಂತದ ಲಸಿಕೆ ಪಡೆದವರು ವಿವಿಧ ಕಾರಣಗಳಿಂದ ಎರಡನೇ ಹಂತದ ಲಸಿಕೆ ಪಡೆಯಲು ಹಿಂಜರಿಯುತ್ತಿದ್ದಾರೆ. ಯಾವ ರೀತಿಯಲ್ಲೂ ಭಯಪಡದೇ ಕಡ್ಡಾಯವಾಗಿ ಲಸಿಕೆ ಪಡೆಯಬೇಕು. ಲಸಿಕೆ ಪಡೆಯುವುದರಿಂದ ಯಾವ ಅಡ್ಡ ಪರಿಣಾಮಗಳೂ ಆಗುವುದಿಲ್ಲ ಎಂದರು. ತಹಸೀಲ್ದಾರ್ ಡಾ.ಕೆ.ಜೆ.ಕಾಂತರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ.ಸೀಮಾ, ತಾಪಂ ಇಒ ತಾರಾನಾಥ್ ಇತರರಿದ್ದರು.