

ಗೌರಿಬಿದನೂರು: ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೀಲ್‌ಡೌನ್ ಆಗಿರುವ ತಾಲೂಕಿನ ಅಲ್ಲಿಪುರಕ್ಕೆ ಸೋಮವಾರ ಜಿಲ್ಲಾ ಪಂಚಾಯಿತಿ ಸಿಇಒ ಬಿ.ೌಜೀಯಾ ತರನ್ನುಮ್, ಕರೊನಾ ನೋಡಲ್ ಅಧಿಕಾರಿ ತೇಜ್ ಆನಂದ್ ರೆಡ್ಡಿ ಭೇಟಿ ನೀಡಿ ಪರಿಶೀಲಿಸಿದರು.
ಯಾವುದೇ ಮೂಲಸೌಲಭ್ಯಗಳ ಕೊರತೆ ಆಗದಂತೆ ನೋಡಿಕೊಳ್ಳಬೇಕು, ಎರಡು ದಿನಕ್ಕೊಮ್ಮೆ ಸೋಂಕು ನಿವಾರಕ ಸಿಂಪಡಿಸುವಂತೆ ಸೂಚಿಸಿದರು. ಬಳಿಕ ಗ್ರಾಮದ ಐ.ಕೆ.ಖಾಸಗಿ ಆಸ್ಪತ್ರೆಯಲ್ಲಿ ಪ್ರಾರಂಭಿಸಿರುವ ಕರೊನಾ ಕೇರ್ ಸೆಂಟರ್‌ನಲ್ಲಿ ಸೋಂಕಿತರ ಆರೋಗ್ಯದ ಮಾಹಿತಿ ಪಡೆದರು.
ಕೇಂದ್ರದಲ್ಲಿ 53 ಮಂದಿಯನ್ನು ದಾಖಲಿಸಲಾಗಿದೆ, ವೈದ್ಯರ ಶಿಫಾರಸಿನ ಮೇರೆಗೆ ಮೂವರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಕೇಂದ್ರಕ್ಕೆ ಸ್ಥಳಾಂತರಿಸಳಾಗಿದೆ, 50 ವರ್ಷ ಮೇಲ್ಪಟ್ಟ ಹಾಗೂ ಬಿಪಿ, ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರ ಸೋಂಕಿತರ ಮೇಲೆ ವಿಶೇಷ ನಿಗಾವಹಿಸುವಂತೆ ಸಿಇಒ ಸೂಚಿಸಿದರು.
ಕಾರ್ಮಿಕರಿಗೆ ಸೋಂಕು: ತೊಂಡೇಬಾವಿಯಲ್ಲಿನ ಎಸಿಸಿ ಸಿಮೆಂಟ್ ಕಾರ್ಖಾನೆಗೆ ಭೇಟಿ ನೀಡಿದ ಸಿಇಒ, ಅಲ್ಲಿನ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಾರ್ಖಾನೆಯ 15 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಅವರನ್ನ ಈಗಾಗಲೇ ನಗರದ ಕೇರ್ ಸೆಂಟರ್‌ಗೆ ದಾಖಲಾಗಿದೆ, ಇವರ ಸಂಪರ್ಕದಲ್ಲಿದ್ದ 150ಕ್ಕೂ ಹೆಚ್ಚು ಮಂದಿ ನೌಕರರ ಮಾಹಿತಿ ಪಡೆದು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು.ತಾಪಂ ಇಒ ಎನ್. ಮುನಿರಾಜು, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಮಹದೇವಸ್ವಾಮಿ, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಶೇಷಾದ್ರಿ ಇತರರಿದ್ದರು.