

ನೆಲಮಂಗಲ: ಕರೊನಾ ಸೋಂಕಿತರ ಸಂಕಷ್ಟಕ್ಕೆ ಸ್ಪಂದಿಸಿರುವ ತಾಲೂಕಿನ ಕೆಲ ಸಂಘ -ಸಂಸ್ಥೆಗಳ ಕಾರ್ಯ ಮಹತ್ವವಾದದ್ದು ಎಂದು ತಹಸೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.
ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ಬುಧವಾರ ಶ್ರೀ ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘ, ಶ್ರೀ ವಿವೇಕಾನಂದ ಸ್ವಸಹಾಯ ಸಂಘ, ಸ್ವಯಂ ಸೇವಕರು, ಕೆಲ ಕಾಂಗ್ರೆಸ್ ಮುಖಂಡರು ಕರೊನಾ ಸೋಂಕಿತರಿಗಾಗಿ ಸಿದ್ಧ ಪಡಿಸಿದ ಪೌಷ್ಟಿಕ ಆಹಾರಕಿಟ್‌ಗಳನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸಿ ಮಾತನಾಡಿದರು.
ಕರೊನಾ ಸೋಂಕು ನಿವಾರಣೆಗೆ ತಾಲೂಕು ಆಡಳಿತದೊಂದಿಗೆ ಸಂಘ-ಸಂಸ್ಥೆಗಳ ಸಹಕಾರ ಅಗತ್ಯ. ಗ್ರಾಮೀಣ ಭಾಗದ ಕೆಲವು ಸೋಂಕಿತರಿಗೆ ಪೌಷ್ಟಿಕಾಂಶಭರಿತ ಆಹಾರ ಸಾಮಗ್ರಿ ಕೊಳ್ಳುವ ಶಕ್ತಿ ಇಲ್ಲ. ಈ ಸಂದರ್ಭದಲ್ಲಿ ಸ್ವಸಹಾಯ ಸಂಘಗಳು ಪೌಷ್ಟಿಕ ಆಹಾರ ನೀಡುತ್ತಿರುವುದು ಸಂಸತದ ಸಂಗತಿ ಎಂದರು.
ಶ್ರೀ ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘದ ನಿರ್ದೇಶಕ ಕನಕರಾಜು ಮಾತನಾಡಿ, ಲಾಕ್‌ಡೌನ್‌ನಿಂದ ಗ್ರಾಮೀಣ ಭಾಗದಲ್ಲಿ ಸಂಕಷ್ಟದ ಜತೆಗೆ ಭೀತಿ ಎದುರಾಗಿದೆ. ಇದನ್ನು ಮನಗಂಡು ಕೆಲ ಸ್ವಸಹಾಯ ಸಂಘಗಳು ಮತ್ತು ಕೆಲ ಕಾಂಗ್ರೆಸ್ ಮುಖಂಡರನ್ನು ಒಳಗೊಂಡ ಸ್ವಯಂ ಸೇವಕರ ತಂಡ 200ಕ್ಕೂ ಹೆಚ್ಚು ಪೌಷ್ಟಿಕ ಆಹಾರ ಕಿಟ್ ವಿತರಣೆ ಮಾಡಿದೆ. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಉಚಿತ ಆಂಬುಲೆನ್ಸ್ ಸೇವೆ ಆರಂಭ ಮಾಡಲಾಗುವುದು ಎಂದರು.
ಆರೋಗ್ಯ ನಿರೀಕ್ಷಕ ನಾಗೇಶ್, ರಾಜಸ್ವನಿರೀಕ್ಷಕ ರವಿಕುಮಾರ್, ಉಪಾಧ್ಯಕ್ಷ ಹ್ಯಾಡಳ್‌ಸತೀಶ್, ನಿರ್ದೇಶಕರಾದ ಪುಟ್ಟಣ್ಣ, ಗಣೇಶ್, ಸದಸ್ಯ ರಾಮಸ್ವಾಮಿ, ಸ್ವಯಂಸೇವಕರಾದ ಜನಾರ್ದನ್, ಮುನಿರಾಜು, ಮಂಜುಗೌಡ, ಪುನೀತ್‌ಕುಮಾರ್, ನರೇಂದ್ರ, ನಯನ್, ಅಮ್ಜಾದ್ ಮತ್ತಿತರು ಉಪಸ್ಥಿತರಿದ್ದರು.