ಸೋಲು ಮೆಟ್ಟಿ ನಿಲ್ಲಲು ಯತ್ನಿಸಿ

7 vikram 4
Published on

ಧಾರವಾಡ: ಜೊತೆಗೆ ಇದ್ದವರ ಸಾಧನೆಯೇ ನಮಗೆ ಸ್ಪೂರ್ತಿ. ಜೀವನದಲ್ಲಿ ಫೇಲ್ ಆಗಿದ್ದನ್ನು ಸಾಧನೆಯ ಹಾದಿಯನ್ನಾಗಿಸುವ ಬಗೆಯೇ ತಿರುಳಾಗಿರುವ ‘ನೀವು ಒಮ್ಮೆ ಫೇಲ್ ಆಗಲೇಬೇಕು’ ಕೃತಿ ಪ್ರತಿಯೊಬ್ಬರೂ ಓದುವಂತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ

ಹಿರೇಮಠ ಹೇಳಿದರು.

ನಗರದ ಕ್ಲಾಸಿಕ್ ಕೆಎಎಸ್, ಐಎಎಸ್ ಸ್ಟಡಿ ಸರ್ಕಲ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ, ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಹೊರತಂದಿರುವ ನಿವೃತ್ತ ಪೊಲೀಸ್ ಅಧಿಕಾರಿ ಡಾ. ಡಿ.ವಿ. ಗುರುಪ್ರಸಾದ ಅವರ ‘ನೀವು ಒಮ್ಮೆ ಫೇಲ್ ಆಗಲೇಬೇಕು-2’ ಕೃತಿ ಕುರಿತು ಅವರು ಮಾತನಾಡಿದರು.

ನಮ್ಮಲ್ಲಿ ಭರವಸೆ, ಧೈರ್ಯವಿದ್ದಾಗ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ನಿಶ್ಚಿತ. ಜೀವನದಲ್ಲಿ ಸೋಲು ಎದುರಾದಾಗ ಜಿಗುಪ್ಸೆಗೊಳ್ಳದೆ ಸೋಲನ್ನು ಹಣಿದು ಮುಂದೆ ಸಾಗಲು ಪ್ರಯತ್ನಿಸಬೇಕು. ವಿದ್ಯಾರ್ಥಿಗಳು ಪಠ್ಯದ ಜತೆಗೆ ನಿರಂತರ ಓದು ರೂಢಿಸಿಕೊಳ್ಳಬೇಕು. ಇದರಿಂದ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಬಹುದು ಎಂದರು.

ಐಎಎಸ್, ಕೆಎಎಸ್ ಅಧಿಕಾರಿಯಾದರೆ ಐಷಾರಾಮಿ ಜೀವನ ನಡೆಸಿ ಹಣ ಗಳಿಸಬಹುದು ಎಂಬುದು ತಪ್ಪು. ಈ ಕಲ್ಪನೆ ಇದ್ದರೆ ಪರೀಕ್ಷೆ ಬರೆಯಬೇಡಿ. ಇದೊಂದು ದೇಶ ಸೇವೆ ಮಾಡುವ ಅವಕಾಶ ಎಂಬ ಮನೋಭಾವ ಬೆಳೆಸಿಕೊಳ್ಳಿ. ಅಧಿಕಾರಿಯಾದ ಬಳಿಕ ಆಡಳಿತದಲ್ಲಿ ನಿಷ್ಠುರತೆಯಿಂದ ಸೇವೆ ಸಲ್ಲಿಸಿದರೆ ಭ್ರಷ್ಟಾಚಾರದಿಂದ ದೂರವಿರಬಹುದು. ಗುರುಪ್ರಸಾದ ಅವರ ಕೃತಿ ಅದ್ಭುತವಾಗಿದೆ. ಈ ಕೃತಿ ವಿದ್ಯಾರ್ಥಿಗಳಿಗೆ ಉತ್ತಮ ಪಾಠ ಕಲಿಸುವುದಲ್ಲದೆ, ಪರೀಕ್ಷೆ ಸಿದ್ಧತೆಗೆ ಪೂರಕ ಶಕ್ತಿಯಾಗಿದೆ ಎಂದರು. ಕ್ಲಾಸಿಕ್ ಸಂಸ್ಥೆ ನಿರ್ದೇಶಕ ಲಕ್ಷ್ಮಣ ಉಪ್ಪಾರ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಪುಸ್ತಕದ ಶೀರ್ಷಿಕೆಯೇ ಸೃಜನಾತ್ಮಕವಾಗಿದೆ. ಶೀರ್ಷಿಕೆ ನೋಡಿದರೆ ಸಾಕು ಓದಬೇಕು ಎನಿಸುತ್ತದೆ. ಈವರೆಗೆ ಸಾಧನೆ ಮಾಡಿದ ಎಲ್ಲರೂ ಜೀವನದಲ್ಲಿ ಒಂದಿಲ್ಲ ಒಂದು ಹಂತದಲ್ಲಿ ಫೇಲ್ ಆಗಿದ್ದಾರೆ. ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಂಡು ಜೀವನದಲ್ಲಿ ಸಾಧನೆ ಮಾಡಿದ್ದಾರೆ ಎಂದರು.

ಲೇಖಕ ಡಾ. ಡಿ.ವಿ. ಗುರುಪ್ರಸಾದ ಮಾತನಾಡಿ, ಯುವಕರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂಬ ಉದ್ದೇಶದಿಂದಲೇ ಈ ಕೃತಿ ರಚನೆ ಮಾಡಲಾಗಿದೆ. ನನ್ನ ಜೀವನದ ಹಲವಾರು ಪರೀಕ್ಷೆಗಳಲ್ಲಿ ಫೇಲ್ ಆಗಿದ್ದೇನೆ. ಆ ಎಲ್ಲ ಅನುಭವಗಳನ್ನೇ ಪುಸ್ತಕ ರೂಪದಲ್ಲಿ ತರಲಾಗಿದೆ ಎಂದರು.

ಜೀವನದ 20ರಿಂದ 30 ವರ್ಷದಲ್ಲಿ ಹೆಚ್ಚಿನ ಸೋಲು ಎದುರಾಗುತ್ತವೆ. ಸೋಲು ಎದುರಿಸಲು ಗೊತ್ತಿರದ ಕಾರಣಕ್ಕೆ ಹಲವು ಅವಘಡಗಳು ನಡೆಯುತ್ತವೆ.

ಆದರೆ ಸೋಲು ಕೊನೇ ಅಲ್ಲ. ಅದನ್ನು ಮೆಟ್ಟಿನಿಂತು ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಿದೆ ಎಂಬುದನ್ನು ಅರಿತು ಮುನ್ನಡೆಯಬೇಕು ಎಂದರು.

ನಾನು ಮತ್ತೊಬ್ಬನ ಜೊತೆ ಹೋಲಿಕೆ ಮಾಡಿಕೊಂಡೇ ಸಾಧನೆ ಮಾಡಿದ್ದೇನೆ. 3 ಬಾರಿ ಐಎಎಸ್ ಪರೀಕ್ಷೆ ಎದುರಿಸಿ ಮೂರೂ ಬಾರಿ ಪಾಸಾಗಿದ್ದೇನೆ. ನಮ್ಮಲ್ಲಿ ಆತ್ಮವಿಶ್ವಾಸ ಇದ್ದರೆ ಋಣಾತ್ಮಕ ಆಲೋಚನೆ ಬರುವುದಿಲ್ಲ. ಸಾಮಾನ್ಯ ಜ್ಞಾನ, ಪ್ರಾಮಾಣಿಕತೆ ಎಲ್ಲಕ್ಕಿಂತ ಮುಖ್ಯವಾಗಿದೆ. ನಿರಂತರ ಪ್ರಯತ್ನ ಇದ್ದರೆ ಯಶಸ್ಸು ಪಡೆಯಬಹುದು. ಉತ್ತರ ಕರ್ನಾಟಕ ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಐಎಎಸ್, ಕೆಎಎಸ್​ನಲ್ಲಿ ತೇರ್ಗಡೆ ಹೊಂದಬೇಕು. ಹೀಗಾಗಿ ಈ ಭಾಗದ ಜನರಿಗೆ ಸಹಾಯ ಮಾಡಲು ಸದಾ ಸಿದ್ಧ ಎಂದರು. ಸಾಹಿತ್ಯ ಪ್ರಕಾಶನದ ಎಂ.ಎ. ಸುಬ್ರಹ್ಮಣ್ಯ, ಸಾಹಿತಿ ಹರ್ಷ ಡಂಬಳ, ಸಮೀರ ಜೋಶಿ, ವಿದ್ಯಾರ್ಥಿಗಳು, ಇತರರು ಇದ್ದರು. ಸ್ಪರ್ಧಾ ಸ್ಪೂರ್ತಿ ಸಂಪಾದಕ

ಐ.ಜಿ. ಚೌಗಲಾ ಸ್ವಾಗತಿಸಿದರು.

ಜೀವನದಲ್ಲಿ ಯಶಸ್ಸು ಕಾಣಲು ಕಠಿಣ ಪರಿಶ್ರಮ ಮುಖ್ಯ. ಈ ಕೃತಿಯನ್ನು ಓದಿ ಸಾಕಷ್ಟು ಕಲಿಯಬಹುದು. ಜೀವನದಲ್ಲಿ ಸೋಲು ಬಂದಾಗ ಯಾವುದೇ ಕಾರಣಕ್ಕೂ ಕುಗ್ಗಬೇಡಿ. ಅದನ್ನು ಪರಾಮರ್ಶೆ ಮಾಡಿಕೊಂಡು ಸ್ಪೂರ್ತಿಯಿಂದ ಮುನ್ನಡೆದರೆ ಯಶಸ್ಸು ಗಳಿಸಬಹುದು. | ಆರ್. ದಿಲೀಪ ಹು-ಧಾ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net