ಸೋರುತ್ತಿದೆ ಶಂಭುಲಿಂಗೇಶ್ವರ ದೇವಸ್ಥಾನ

6kdl1f
Published on

ಕುಂದಗೋಳ: ಸತತ ಮಳೆಯಿಂದಾಗಿ ಪಟ್ಟಣದ ಐತಿಹಾಸಿಕ ಶಂಭುಲಿಂಗೇಶ್ವರ ದೇವಸ್ಥಾನ ಸೋರುತ್ತಿದೆ. ಇದರಿಂದಾಗಿ ಸುಂದರ ಕೆತ್ತನೆಯ ಶಿಲೆಗಳು ಹಾಗೂ ಕಲಾಕೃತಿಗಳು ಹಾಳಾಗುತ್ತಿವೆ. ಕಲ್ಲಿನ ಮೇಲ್ಛಾವಣಿ ದಿನೇ ದಿನೆ ಬಿರುಕು ಬಿಡತೊಡಗಿದೆ.

11ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ ಜಕಣಾಚಾರಿ ನಿರ್ವಿುಸಿದ ಈ ಶಂಭುಲಿಂಗ ದೇವಾಲಯವು ಸ್ವಯಂಭು ದೇಗುಲವಾಗಿದೆ. ದೇವಸ್ಥಾನವು ಪೂರ್ವ, ದಕ್ಷಿಣ ಮತ್ತು ಉತ್ತರ ದಿಕ್ಕಿನಲ್ಲಿ ದ್ವಾರಗಳನ್ನು ಹೊಂದಿದೆ. ಗರ್ಭಗುಡಿಯಲ್ಲಿರುವ ಶಿವಲಿಂಗವು ಕಂದು ಬಣ್ಣ ಹೊಂದಿರುವುದು ಅಪರೂಪ ಮತ್ತು ವಿಶೇಷವಾಗಿದೆ. ಗರ್ಭಗುಡಿಯಲ್ಲಿ ಗಣಪತಿ ಮತ್ತು ಪಾರ್ವತಿಯ ಮೂರ್ತಿಗಳೂ ಇವೆ.

ಶಿವಲಿಂಗ ಕೆಂಪು ಸಾಲಿಗ್ರಾಮ ಮತ್ತು ಪೀಠವು ಕೃಷ್ಣವರ್ಣ ಶಿಲೆಯಿಂದ ನಿರ್ವಿುತವಾಗಿದೆ. ದ್ವಾದಶ ಜ್ಯೋತಿರ್ಲಿಂಗಗಳನ್ನು ಹೊರತುಪಡಿಸಿದರೆ ಇಂಥ ಶಿವಲಿಂಗವನ್ನೂ ಬೇರೆಲ್ಲೂ ಕಾಣಲಾರದು ಎಂದು ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು 15 ವರ್ಷಗಳ ಹಿಂದೆ ಬಣ್ಣಿಸಿದ್ದಾರೆ. 70 ಅಡಿ ಉದ್ದ ಹಾಗೂ 50 ಅಡಿ

ಅಗಲ ಇರುವ ದೇವಸ್ಥಾನದ ಒಳಗೆ ಬೃಹದಾಕಾರದ 68 ಕಲ್ಲಿನ ಕಂಬಗಳು ಕಣ್ಮನ ಸೆಳೆಯುತ್ತವೆ. ಇಂಥ ಇತಿಹಾಸ ಪ್ರಸಿದ್ಧ ದೇವಸ್ಥಾನವನ್ನು ಕೂಡಲೆ ಪುರಾತತ್ವ ಇಲಾಖೆ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರ ಮನವಿ ಮಾಡಿದ್ದಾರೆ. ಜನಪ್ರತಿನಿಧಿಗಳು ದೇವಸ್ಥಾನವನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ಲಕ್ಷ್ಮೇಶ್ವರದಲ್ಲಿರುವ ಸೋಮೇಶ್ವರ ದೇವಸ್ಥಾನವನ್ನು ಇನ್ಪೋಸಿಸ್​ನ ಸುಧಾ ಮೂರ್ತಿ ಅವರು ಯಾವ ರೀತಿ ಅಭಿವೃದ್ಧಿಪಡಿಸಿದ್ದರೋ ಅದೇರೀತಿ ಇಲ್ಲಿರುವ ಶಂಭುಲಿಂಗೇಶ್ವರ ದೇವಸ್ಥಾನವನ್ನು ಸರ್ಕಾರ ಮತ್ತು ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ವತಿಯಿಂದ ಅಭಿವೃದ್ಧಿ ಪಡಿಸಬೇಕು. | ವೀರೇಶ ರವದಿಶಂಭುಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ

ಈಗ ತಾನೇ ವರ್ಗಾವಣೆಗೊಂಡು ಬಂದು ಅಧಿಕಾರ ಸ್ವೀಕರಿಸಿದ್ದೇನೆ. ಶಂಭುಲಿಂಗೇಶ್ವರ ದೇವಸ್ಥಾನದ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸುತ್ತೇನೆ.| ಎಸ್.ಎಂ. ಪೂಜಾರಿಜಿಲ್ಲಾ ಪುರಾತತ್ವ ಇಲಾಖೆ ಅಧಿಕಾರಿ ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net