ಸೋಯಾಬೀನ್​ಗೆ ತುಕ್ಕುರೋಗ ಬಾಧೆ

2 Dwd 5
Published on

ಧಾರವಾಡ: ಮುಂಗಾರು ಹಂಗಾಮಿನಲ್ಲಾದ ಬೆಳೆ ಹಾನಿ ವೀಕ್ಷಣೆಗೆ ಅಧಿಕಾರಿಗಳು ಬಾರದಿರುವುದನ್ನು ಖಂಡಿಸಿ ಕಲಘಟಗಿ ತಾಲೂಕಿನ ಮಿಶ್ರಿಕೋಟಿ, ಇತರ ಗ್ರಾಮಗಳ ರೈತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.

ಮಿಶ್ರಿಕೋಟಿ, ಉಗ್ನಿಕೇರಿ ಗ್ರಾ.ಪಂ. ವ್ಯಾಪ್ತಿಯ ಮಿಶ್ರಿಕೋಟಿ, ಉಗ್ನಿಕೇರಿ, ಚಳಮಟ್ಟಿ, ಕಾಮಧೇನು, ಕಾಡನಕೊಪ್ಪ ಹಾಗೂ ಹಾರೋಗೇರಿ ಸೇರಿದಂತೆ ಇತರ ಗ್ರಾಮಗಳ ರೈತರು ಮುಂಗಾರು ಹಂಗಾಮಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೋಯಾಬೀನ್ ಬೆಳೆ ಬಿತ್ತನೆ ಮಾಡಿದ್ದಾರೆ. ಈಗ ಬೆಳೆಗೆ ತುಕ್ಕುರೋಗದ ಬಾಧೆ ಕಾಣಿಸಿಕೊಂಡಿದ್ದು, ಹಲವು ಔಷಧ ಸಿಂಪಡಿಸಿದರೂ ರೋಗ ಹತೋಟಿಗೆ ಬಂದಿಲ್ಲ. ಹೀಗಾಗಿ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಬಗ್ಗೆ ಕೃಷಿ ವಿಜ್ಞಾನಿಗಳು ಅಥವಾ ಕೃಷಿ ಇಲಾಖೆಯ ಕ್ಷೇತ್ರ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿಲ್ಲ.

ಮಳೆ ಹೆಚ್ಚಾಗಿ ಬೆಳೆ ಹಾನಿಯಾದರೂ ಅಧಿಕಾರಿಗಳು ಸಮೀಕ್ಷೆ ನಡೆಸಿಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.

ರೈತರಾದ ಕೇರಪ್ಪ ಚಿಕ್ಕಾಡಿ, ಚನ್ನಪ್ಪ ಉಳ್ಳಿಕಾಶಿ, ಸುರೇಶ ಮುದ್ದೇನವರ, ವಿಠ್ಠಲ ಭೋಸಲೆ, ಸಿದ್ದಪ್ಪ ಚಿಕ್ಕಾಡಿ, ಅಶೋಕ ಬಡಿಗೇರ ಹಾಗೂ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net