

ಶಿವಮೊಗ್ಗ: ಕರೊನಾದಿಂದ ಆಯುರ್ವೆದಕ್ಕೆ ಹೆಚ್ಚಿನ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ನಗರ ಹೊರವಲಯದ ಸೋಗಾನೆ ಬಳಿ ತುರ್ತು ಚಿಕಿತ್ಸೆ ಮತ್ತು ಸಂಶೋಧನೆಗಾಗಿ ಕೂಡಲೇ ಆಯುರ್ವೆದ ವಿವಿ ಸ್ಥಾಪಿಸುವಂತೆ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರದ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಸರ್ಕಾರಕ್ಕೆ ಒತ್ತಾಯಿಸಿದರು.
ಪ್ರಸ್ತುತ ಕರೊನಾ ಕಾಯಿಲೆ ಹೆಚ್ಚಾಗುತ್ತಿದೆ. ಇದರ ಜತೆಗೆ ಡೆಂಘಿ, ಮಂಗನಕಾಯಿಲೆ, ಎಚ್1ಎನ್1 ಮುಂತಾದ ಮಾರಕ ರೋಗಗಳು ಹಬ್ಬುತ್ತಿವೆ. ಈ ಎಲ್ಲವನ್ನು ತಡೆಗಟ್ಟಲು ಮತ್ತು ಮನುಷ್ಯನಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಅನುಕೂಲವಾಗುವಂತೆ ಆಯುರ್ವೆದ ವಿವಿ ಸ್ಥಾಪಿಸುವ ಅಗತ್ಯವಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಆಯುರ್ವೆದ ಭಾರತೀಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಪಡೆದಿದೆ. ಎಲ್ಲ ಕಾಯಿಲೆಗಳಿಗೂ ಇದು ದಿವ್ಯೌಷಧವಾಗಲಿದೆ. ಸರ್ಕಾರ ಇದನ್ನು ಪ್ರೋತ್ಸಾಹಿಸಬೇಕಿದೆ. ದೇಶವಿದೇಶದಲ್ಲೂ ಇದರ ಪ್ರಾಮುಖ್ಯತೆ ಹೆಚ್ಚಾಗಿದೆ. ಕರೊನಾ ವೈರಸ್ಗೆ ಇದು ರಾಮಬಾಣ ಎಂದು ಆಯುರ್ವೆದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಆಯುರ್ವೆದವನ್ನು ಸಂಶೋಧನೆಗೆ ಒಳಪಡಿಸುವ ಅಗತ್ಯ ಇದೆ ಎಂದರು.
ಈಗಾಗಲೇ ಸೋಗಾನೆ ಬಳಿ 100 ಎಕರೆ ಸರ್ಕಾರಿ ಜಮೀನನ್ನು ಆಯುರ್ವೆದಿಕ್ ಕಾಲೇಜು ಮತ್ತು ಆಸ್ಪತ್ರೆಗಾಗಿ ಸರ್ಕಾರ ಮಂಜೂರು ಮಾಡಿದೆ. ಅದಕ್ಕೆ ಪೂರಕವಾಗಿ ಗಾಜನೂರು ಬಳಿ 50 ಎಕರೆ ಪ್ರದೇಶದಲ್ಲಿ ಗಿಡಮೂಲಿಕೆ ವನ ಸ್ಥಾಪಿಸುವ ಗುರಿ ಹೊಂದಲಾಗಿದೆ. ಆಯುರ್ವೆದ ವಿವಿಗೆ 2.7 ಲಕ್ಷ ಕೋಟಿ ರೂ. ಕೂಡ ಮಂಜೂರಾಗಿದೆ. ಈ ಜಾಗದ ಬಗರ್ಹುಕುಂ ರೈತರಿಗೂ ಪರಿಹಾರ ನೀಡಲಾಗಿದೆ. ಶೀಘ್ರವೇ ಆಯುರ್ವೆದಿಕ್ ವಿವಿ ಸ್ಥಾಪಿಸಲು ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದಾಗಬೇಕು ಎಂದರು.
ಇದಕ್ಕಾಗಿ ಮತ್ತೆ 110 ಕೋಟಿ ರೂ. ತುರ್ತಾಗಿ ಬಿಡುಗಡೆ ಮಾಡಬೇಕು. ವಿಳಂಬ ನೀತಿ ಅನುಸರಿಸಿದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರಮುಖರಾದ ಹೊಳೆಮಡಿಲು ವೆಂಕಟೇಶ್, ರಾಜಮ್ಮ, ಸಂಗಯ್ಯ, ಬಿ.ವೆಂಕಟಗಿರಿ, ಶಂಕ್ರಾನಾಯ್ಕ ಸುದ್ದಿಗೋಷ್ಠಿಯಲ್ಲಿದ್ದರು.