ಸೋಂಕು ಮುಕ್ತ ಮಾದರಿ ಗ್ರಾಮಗಳು

27 Dwd 4A (Nayakana Hulikatti)
Published on

ಧಾರವಾಡ: ಕರೊನಾ 2ನೇ ಅಲೆ ತಾಂಡವವಾಡುತ್ತಿದೆ. ಜಿಲ್ಲೆಯಲ್ಲಿ ಪ್ರತಿದಿನ ಸರಾಸರಿ 900 ಹೊಸ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ನಗರ ಅಷ್ಟೇ ಅಲ್ಲ, ಗ್ರಾಮೀಣ ಭಾಗದಲ್ಲೂ ಕರೊನಾ ಹಾವಳಿ ಮುಂದುವರಿದಿದೆ. ಈ ಮಧ್ಯೆ ತಾಲೂಕಿನ ಕೆಲ ಗ್ರಾಮಗಳಲ್ಲಿ ಕರೊನಾ ಸುಳಿದಿಲ್ಲ. ಕೋವಿಡ್ ಮೊದಲ ಹಾಗೂ 2ನೇ ಅಲೆಯ ಭೀಕರತೆಯ ನಡುವೆಯೂ ಈ ಗ್ರಾಮಗಳು ಅತ್ಯಂತ ಸುರಕ್ಷಿತವಾಗಿ ಉಳಿದುಕೊಂಡಿವೆ.
ತಾಲೂಕಿನ ಯರಿಕೊಪ್ಪ ಗ್ರಾ.ಪಂ. ವ್ಯಾಪ್ತಿಯ ನಾಯಕನ ಹುಲಿಕಟ್ಟಿ 750 ಜನಸಂಖ್ಯೆ ಇರುವ ಪುಟ್ಟ ಗ್ರಾಮ. ಒಂದು ವಾರ್ಡ್​ಗೆ ಮೈಲಾರಿ ಕುರುಬರ ಹಾಗೂ ಪವಿತ್ರಾ ಬ್ಯಾಟಣ್ಣವರ ಸದಸ್ಯರಾಗಿದ್ದಾರೆ. ಗ್ರಾ.ಪಂ., ಸ್ಥಳೀಯ ಆರೋಗ್ಯ ಇಲಾಖೆ ಕಾರ್ಯಕರ್ತರು ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತರ ಸಹಕಾರದೊಂದಿಗೆ ಇವರಿಬ್ಬರೂ ಗ್ರಾಮಕ್ಕೆ ಕರೊನಾ ನುಸುಳದಂತೆ ಕಾಪಾಡುತ್ತಿದ್ದಾರೆ.
ಗ್ರಾ.ಪಂ. ಸದಸ್ಯರು ಹಿರಿಯರ ಮಾರ್ಗದರ್ಶನದಲ್ಲಿ ಪ್ರತಿದಿನ ಗ್ರಾಮದ ಮನೆಮನೆಗೆ ಭೇಟಿ ನೀಡುತ್ತಾರೆ. ಪ್ರತಿಯೊಬ್ಬರೂ ಪರಸ್ಪರ ಅಂತರ ಕಾಪಾಡಿಕೊಳ್ಳುವಂತೆ ಸೂಚಿಸುತ್ತಾರೆ. ಎಲ್ಲರೂ ಬಿಸಿನೀರು, ಕಷಾಯ ಕುಡಿಯುವಂತೆ ಸಲಹೆ ನೀಡುತ್ತಾರೆ. ಮುಖ್ಯವಾಗಿ ಗ್ರಾಮವನ್ನು ಸಂರ್ಪಸುವ ಮುಖ್ಯ ರಸ್ತೆಯನ್ನು ಮುಳ್ಳು- ಕಂಟಿ ಹಾಕಿ ಬಂದ್ ಮಾಡಿಸಿದ್ದಾರೆ. ಗ್ರಾಮದ ಯಾರೊಬ್ಬರೂ ಹೊರಗೆ ಹೋಗುವಂತಿಲ್ಲ. ಹೊರಗಿನವರಿಗೆ ಗ್ರಾಮದೊಳಗೆ ಪ್ರವೇಶವಿಲ್ಲ. ಯಾರೂ ಗ್ರಾಮದಲ್ಲಿ ಅನವಶ್ಯಕವಾಗಿ ಸುತ್ತಾಡುವಂತಿಲ್ಲ. ಗುಡಿ- ಕಟ್ಟೆಗಳ ಮೇಲೆ ಗುಂಪಾಗಿ ಕುಳಿತು ಹರಟೆ ಹೊಡೆಯುವಂತಿಲ್ಲ. ಹಿರಿಯರ ಆದೇಶವನ್ನು ಗ್ರಾಮಸ್ಥರೆಲ್ಲರೂ ತಪ್ಪದೆ ಪಾಲಿಸುತ್ತಿದ್ದಾರೆ.
ಇನ್ನು ಗ್ರಾಮದಲ್ಲಿ ಒಂದೇ ಅಂಗಡಿಯನ್ನು ತೆರೆಯಲು ಅವಕಾಶ ನೀಡಿದ್ದಾರೆ. ಖರೀದಿ ವೇಳೆ ಜನ ಅಂತರ ಕಾಪಾಡಿ ಬೇಕಾದ ಸಾಮಗ್ರಿ ಖರೀದಿಸುವುದನ್ನು ರೂಢಿಸಿಕೊಂಡಿದ್ದಾರೆ. ಅಂಗಡಿ ಮಾಲೀಕನೊಬ್ಬನೇ ಮಾರುಕಟ್ಟೆಗೆ ಹೋಗಿ ಎರಡು ಮಾಸ್ಕ್ ಹಾಕಿಕೊಂಡು ಸುರಕ್ಷತಾ ಕ್ರಮ ಪಾಲಿಸುತ್ತಿರುವುದರಿಂದ ಗ್ರಾಮದಲ್ಲಿ ಯಾರಿಗೂ ಕರೊನಾ ಸುಳಿದಿಲ್ಲ. ಇದೇ ರೀತಿ ಗ್ರಾಮದ ಒಬ್ಬನಿಗೆ ತರಕಾರಿ ತಂದು ಮಾರಾಟ ಮಾಡುವ ಜವಾಬ್ದಾರಿ ವಹಿಸಲಾಗಿದೆ. ಗ್ರಾಮಸ್ಥರು ಅತಿ ತುರ್ತು ಕೆಲಸಗಳಿದ್ದರೆ ಮಾತ್ರ ಗ್ರಾಮದಿಂದ ಹೊರಹೋಗಲು ಅನುಮತಿ ಪಡೆದು ಹೋಗಬೇಕು ಎಂಬ ನಿಯಮ ರೂಪಿಸಲಾಗಿದೆ.
ಯರಿಕೊಪ್ಪ ಗ್ರಾ.ಪಂ.ನಿಂದ ನಾಯಕನ ಹುಲಿಕಟ್ಟಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ. ಲಾಕ್​ಡೌನ್​ನಿಂದ ಕೂಲಿ ಬೇಡಿಕೆ ಇದ್ದು, ಹಳ್ಳ, ಕೆರೆ ಹೂಳೆತ್ತುವ ಕಾಮಗಾರಿಗಳಿಗೆ ಗ್ರಾಮದ 20 ಜನರನ್ನು ಮಾತ್ರ ನರೇಗಾ ಕಾಮಗಾರಿಗಳಿಗೆ ನೇಮಿಸಿಕೊಳ್ಳಲಾಗಿದೆ. 7 ದಿನಗಳ ನಂತರ ಬೇರೆ 20 ಜನರಿಗೆ ಉದ್ಯೋಗ ನೀಡಲಾಗುತ್ತಿದೆ.
ಹುಣಸಿಕುಮರಿಯೂ ಸೇಫ್: ಇದೇ ರೀತಿ ತಾಲೂಕಿನ ಕಲಕೇರಿ ಗ್ರಾ.ಪಂ. ವ್ಯಾಪ್ತಿಯ ಹುಣಸಿಕುಮರಿ ಗ್ರಾಮಸ್ಥರು ಕೂಡ ಕರೊನಾದಿಂದ ದೂರವಿದ್ದಾರೆ. 137 ಕುಟುಂಬ ಸೇರಿ 800 ಜನಸಂಖ್ಯೆ ಇರುವ ಇಲ್ಲಿನ ಜನ ಕೃಷ್ಣ ಗೌಳಿ ಜನಾಂಗಕ್ಕೆ ಸೇರಿದವರು. ಎಲ್ಲ ಕುಟುಂಬಗಳ ಮೂಲ ಉದ್ಯೋಗ ಹೈನುಗಾರಿಕೆ. ಮೊದಲಿನಿಂದಲೂ ನಗರ ಸಂಪರ್ಕದಿಂದ ದೂರ ಇರುವ ಇಲ್ಲಿನ ಜನ, ಕರೊನಾ ಬಂದಾಗಿನಿಂದ ಮತ್ತಷ್ಟು ದೂರವಾಗಿದ್ದಾರೆ. ಗ್ರಾಮದ ಕೆಲವರಷ್ಟೇ ಹತ್ತಿರದ ಹಳಿಯಾಳಕ್ಕೆ ಹೋಗಿ ಅಗತ್ಯ ವಸ್ತು, ಕಿರಾಣಿ ಖರೀದಿಸುತ್ತಾರೆ. ಕಾಡಿನಲ್ಲಿ ಇರುವುದರಿಂದ ಬೆಳಗ್ಗೆಯಿಂದ ಸಂಜೆವರೆಗೆ ಜಾನುವಾರುಗಳ ಚಾಕರಿ ಮಾಡಿಕೊಂಡಿರುತ್ತಾರೆ. ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಿರುವುದರಿಂದ ಯಾರಲ್ಲೂ ಕರೊನಾ ಸೋಂಕು ಕಾಣಿಸಿಕೊಂಡಿಲ್ಲ.
ತಾಲೂಕಿನ ಹಳ್ಳಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಧೂಪರ್ತಿವಾಡ, ಕೊಕ್ಕರೆವಾಡ ಗ್ರಾಮಸ್ಥರಿಗೂ ಕರೊನಾ ಬಾಧೆ ಕಾಡಿಲ್ಲ. ಹಳ್ಳಿಗೇರಿ ಗ್ರಾ.ಪಂ.ನಿಂದ ಜಾಗೃತಿ ಮೂಡಿಸಲಾಗಿದ್ದು, ಜನ ಸುರಕ್ಷಿತವಾಗಿದ್ದಾರೆ. ನಗರ ಸಂಪರ್ಕಕ್ಕೆ ಹೋಗದ ಇಲ್ಲಿನ ಜನ ಭಯಭೀತಿ ಇಲ್ಲದೆ ಕೃಷಿ, ಹೈನುಗಾರಿಕೆ ಕಾಯಕದಲ್ಲಿ ನಿರತರಾಗಿದ್ದಾರೆ.

ಗ್ರಾಮಕ್ಕೆ ಹೊರಗಿನವರು ಬರದಂತೆ ಸ್ವಯಂ ಸೀಲ್​ಡೌನ್ ಮಾಡಲಾಗಿದೆ. ವಾರಕ್ಕೆ ಎರಡು ಬಾರಿ ಪ್ರತಿ ಗಲ್ಲಿಗಳನ್ನು ಸ್ಯಾನಿಟೈಸ್ ಮಾಡಲಾಗುತ್ತಿದೆ. ಕೊಳಚೆ ನೀರು ಹರಿಯುವ ಸ್ಥಳದಲ್ಲಿ ಕ್ರಿಮಿನಾಶಕ ಸಿಂಪಡಿಸಿ ಸ್ವಚ್ಛವಾಗಿ ಇಟ್ಟುಕೊಳ್ಳಲಾಗಿದೆ. ವಿವಿಧ ಸಂಘಟನೆಗಳಿಂದ ಬಡವರಿಗೆ ಅಗತ್ಯ ವಸ್ತುಗಳ ಕಿಟ್​ಗಳನ್ನು ಸುರಕ್ಷತಾ ಕ್ರಮ ಪಾಲಿಸಿ ವಿತರಿಸಲಾಗುತ್ತಿದೆ.| ಮೈಲಾರಿ ಯರಿಕೊಪ್ಪ ಗ್ರಾ.ಪಂ. ಸದಸ್ಯಈವರೆಗೆ ಹುಣಸಿಕುಮರಿ ಗ್ರಾಮದ ಯಾರಲ್ಲೂ ಕರೊನಾ ಸೋಂಕು ಕಂಡುಬಂದಿಲ್ಲ. ಗ್ರಾಮಕ್ಕೆ ವಾರಕ್ಕೆರಡು ಬಾರಿ ಭೇಟಿ ನೀಡಿ ಎಲ್ಲರ ಆರೋಗ್ಯ ಪರಿಶೀಲಿಸಲಾಗುತ್ತಿದೆ. ನಗರ ಸಂಪರ್ಕದಿಂದ ದೂರವಿರುವ ಗ್ರಾಮಸ್ಥರು, ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದು, ಕರೊನಾದಿಂದ ಸುರಕ್ಷಿತವಾಗಿದ್ದಾರೆ.| ಬಿ.ಎ. ಮಡಿವಾಳರ ಕಲಕೇರಿ ಪಿಡಿಒಧೂಪರ್ತಿವಾಡ, ಕೊಕ್ಕರೆವಾಡ ಗ್ರಾಮಗಳಲ್ಲಿ ಈವರೆಗೆ ಕರೊನಾ ಪ್ರಕರಣ ಪತ್ತೆಯಾಗಿಲ್ಲ. ಜನ ಸರ್ಕಾರದ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವುದರಿಂದ ಸುರಕ್ಷಿತವಾಗಿದ್ದಾರೆ. ಎರಡೂ ಕಡೆ ಸ್ಯಾನಿಟೈಸ್ ಮಾಡಲಾಗಿದ್ದು, ಸುರಕ್ಷತಾ ಕ್ರಮ ಅನುಸರಿಸುತ್ತಿರುವ ಜನ ತಮ್ಮನ್ನು ತಾವು ರಕ್ಷಿಸಿಕೊಂಡಿದ್ದಾರೆ.| ಮೃತ್ಯುಂಜಯ ಮೆಣಸಿನಕಾಯಿ ಹಳ್ಳಿಗೇರಿ ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net