

ಹುಬ್ಬಳ್ಳಿ: ಲಾಕ್ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ನೀಡಿದ್ದ ಅವಧಿಯಲ್ಲಿ ಮಂಗಳವಾರದಂದು ನಗರದಲ್ಲಿ ಜನದಟ್ಟಣೆ ಕಂಡುಬಂದಿತು.
ವಿದ್ಯಾನಗರದ ಸಿದ್ದೇಶ್ವರ ಪಾರ್ಕ್, ಉಣಕಲ್ಲ, ಕೇಶ್ವಾಪುರ, ದುರ್ಗದಬೈಲ್, ಎಂಜಿ ಮಾರ್ಕೆಟ್, ಹಳೇ ಹುಬ್ಬಳ್ಳಿ, ಗೋಕುಲ ರಸ್ತೆ ಸೇರಿ ಪ್ರಮುಖ ಬಡಾವಣೆಗಳಲ್ಲಿ ಜನರು ದಿನಸಿ ಹಾಗೂ ತರಕಾರಿ ಖರೀದಿಗೆ ಮುಗಿಬಿದ್ದಿದ್ದರು.
ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ, ಸರಿಯಾಗಿ ಮಾಸ್ಕ್ ಧರಿಸದೆ, ಪರಸ್ಪರ ಅಂತರ ಕಾಯ್ದುಕೊಳ್ಳದೇ ಜನರು ಮಾರುಕಟ್ಟೆಯಲ್ಲಿ ಗುಂಪಾಗಿ ನಿಂತಿದ್ದರು.
ನಿಗದಿತ ಅವಧಿ ಮುಗಿದ ಬೆಳಗ್ಗೆ 10 ಗಂಟೆ ನಂತರವೂ ಪ್ರಮುಖ ಹಾಗೂ ಒಳ ರಸ್ತೆಗಳಲ್ಲಿ ವಾಹನಗಳ ಸಂಚಾರ ಹೆಚ್ಚಿಗೆ ಇತ್ತು. ಪ್ರಮುಖ ವೃತ್ತಗಳಲ್ಲಿ ಪೊಲೀಸರು ವಾಹನಗಳನ್ನು ತಡೆದು ವಿಚಾರಿಸುತ್ತಿದ್ದರು. ಆದರೆ, ಒಳ ರಸ್ತೆಗಳಲ್ಲಿ ಪೊಲೀಸರು ಇರದ ಕಾರಣ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದವು.
ನಕಲಿ ಪತ್ರಕರ್ತ ಪೊಲೀಸ್ ವಶಕ್ಕೆ
ಪತ್ರಕರ್ತನೆಂದು ನಕಲಿ ಗುರುತಿನ ಚೀಟಿ ಇಟ್ಟುಕೊಂಡು ಬೈಕ್ನಲ್ಲಿ ತಿರುಗುತ್ತಿದ್ದ ವ್ಯಕ್ತಿ ಹಾಗೂ ಆತನ ಬೈಕ್ ಅನ್ನು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಪೊಲೀಸರು ವಶಪಡಿಸಿಕೊಂಡರು. ಬೈಕ್ಗೆ ಪ್ರೆಸ್ ಎಂಬ ಫಲಕ ಲಗತ್ತಿಸಿಕೊಂಡ ಜಾಕ್ ನೆಲ್ಸನ್ ಎಂಬ ವ್ಯಕ್ತಿಯನ್ನು ಪೊಲೀಸರು ತಡೆದರು. ಡಿಸಿಪಿ ರಾಮರಾಜನ್ ಅವರು ಆತನ ಗುರುತಿನ ಚೀಟಿ ಪರಿಶೀಲಿಸಿದರು. ಆತ ನಕಲಿ ಪತ್ರಕರ್ತನೆಂದು ತಿಳಿದ ನಂತರ, ಆತನನ್ನು ಉಪನಗರ ಠಾಣೆಗೆ ಪೊಲೀಸರು ಕರೆದುಕೊಂಡು ಹೋದರು. ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನ ಸವಾರರನ್ನು ತಡೆದ ಡಿಸಿಪಿ ರಾಮ ರಾಜನ್, ವಾಹನಗಳನ್ನು ವಶಪಡಿಸಿ ಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.