ಸೋಂಕಿತರ ಮನೆ ಬಾಗಿಲಿಗೆ ರೆಡ್ ಟೇಪ್!

HDMC edit
Published on

ಹುಬ್ಬಳ್ಳಿ: ಕರೊನಾ ಸೋಂಕು ದೃಢಪಟ್ಟು ಮನೆಯಲ್ಲಿ ಆರೈಕೆಯಲ್ಲಿರುವವರ (ಹೋಂ ಐಸೋಲೇಷನ್) ನಿವಾಸದ ಮುಂದೆ ಅಥವಾ ಮನೆಯ ಬಾಗಿಲಿಗೆ ‘ರೆಡ್ ಟೇಪ್’ ಕಟ್ಟಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮುಂದಾಗಿದೆ. ಹು-ಧಾ ಅವಳಿ ನಗರದಲ್ಲಿ ಇದೇ ಗುರುವಾರ ಅಥವಾ ಶುಕ್ರವಾರದಿಂದ ಈ ಉಪಕ್ರಮ ಜಾರಿಗೆ ಬರಲಿದೆ.

ಸುಮಾರು 25 ದಿನಗಳ ಹಿಂದಿನಿಂದ ರಾಜಧಾನಿ ಬೆಂಗಳೂರು ಮಹಾನಗರದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಸಿ) ಅನುಸರಿಸುತ್ತಿರುವ ಇಂತಹ ಕ್ರಮವನ್ನು ಇಲ್ಲಿಯ ಮಹಾನಗರ ಪಾಲಿಕೆ ಫಾಲೋ ಮಾಡಲು ಹೊರಟಿದೆ.

ಎಚ್​ಡಿಎಂಸಿ: ಡೇಂಜರ್-ಕೀಪ್ ಅವೇ (ಎಚ್​ಡಿಎಂಸಿ: ಅಪಾಯ-ದೂರ ಇರಿ) ಎಂಬ ಬರಹವನ್ನು ಕೆಂಪು ಪಟ್ಟಿಯ ಮೇಲೆ ಮುದ್ರಿಸಲಾಗುತ್ತಿದೆ. ಕೆಂಪು ಪಟ್ಟಿಯು 4 ಇಂಚು ಅಗಲವಿರಲಿದೆ. 2 ಕಿ.ಮೀ. ಉದ್ದದಷ್ಟು ಕೆಂಪು ಪಟ್ಟಿಯ ಮೇಲೆ ಬರಹ ಮುದ್ರಿಸಲು ಪಾಲಿಕೆ ಪ್ರಿಂಟಿಂಗ್ ಪ್ರೆಸ್​ಗೆ ಆರ್ಡರ್ ನೀಡಿದೆ. ಅದು ಬುಧವಾರ (ಜೂನ್ 2) ಪಾಲಿಕೆಯ ಕೈ ಸೇರಲಿದೆ.

ಕರೊನಾ ಸೋಂಕಿತರು ಮನೆಯಿಂದ ಹೊರಗೆ ಬರುವುದನ್ನು ತಡೆಗಟ್ಟಲು ಹಾಗೂ ಯಾವ ಮನೆಯಲ್ಲಿ ಕರೊನಾ ಸೋಂಕಿತರು ಇದ್ದಾರೆ ಎಂಬುದು ಅಕ್ಕಪಕ್ಕದ ನಿವಾಸಿಗಳಿಗೆ ತಿಳಿಯಲಿ ಎಂಬ ಕಾರಣಕ್ಕೆ ಪಾಲಿಕೆ ಈ ಮಾದರಿಯನ್ನು ಅನುಸರಿಸಲು ಹೆಜ್ಜೆ ಇಟ್ಟಿದೆ. ಕರೊನಾ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಯಲು ಈ ಕ್ರಮ ಪರಿಣಾಮಕಾರಿ ಎಂದು ಪಾಲಿಕೆ ಭಾವಿಸಿದೆ.

ಕರೊನಾ 2ನೇ ಅಲೆ ನಿಯಂತ್ರಣಕ್ಕೆ ಲಾಕ್​ಡೌನ್ ಜಾರಿಯಾದ ಬಳಿಕ ಧಾರವಾಡ ಜಿಲ್ಲೆಯಲ್ಲಿ ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಕೊಂಚ ಇಳಿಮುಖವಾಗಿದೆ. ಆದರೆ, ಈಗಲೂ ನಿತ್ಯ 500-600 ಪಾಸಿಟಿವ್ ಪ್ರಕರಣಗಳು ಬರುತ್ತಿವೆ. ಜಿಲ್ಲೆಯ ಒಟ್ಟು ಪ್ರಕರಣಗಳಲ್ಲಿ ಶೇ. 65ರಿಂದ 70ರಷ್ಟು ಹುಬ್ಬಳ್ಳಿ-ಧಾರವಾಡ ಅವಳಿ ನಗರದ್ದಾಗಿರುತ್ತದೆ. ಗ್ರಾಮೀಣ ಭಾಗದ ಸೋಂಕಿತರಿಗೆ ಹೋಂ ಐಸೋಲೇಷನ್​ನಲ್ಲಿರಲು ಅವಕಾಶವಿಲ್ಲ. ಅವರು ಕೋವಿಡ್ ಕೇರ್ ಸೆಂಟರ್ (ಸಿಸಿಸಿ)ಗೆ ದಾಖಲಾಗಬೇಕು. ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಸೋಂಕಿತರು ಮನೆಯಲ್ಲಿಯೇ ಆರೈಕೆಯಲ್ಲಿರಬಹುದು.

ಯಾವುದೇ ವಸತಿ ಸಂಕೀರ್ಣ (ಅಪಾರ್ಟ್​ವೆುಂಟ್), ಅಕ್ಕ ಪಕ್ಕದ ರಸ್ತೆ, ಒಂದೇ ರಸ್ತೆಯಲ್ಲಿರುವ 2-3 ಮನೆಗಳಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಕರೊನಾ ಪ್ರಕರಣಗಳು ಪತ್ತೆಯಾದಲ್ಲಿ ಆ ಪ್ರದೇಶವನ್ನು ಕಂಟೇನ್ಮೆಂಟ್ ಜೋನ್ ಎಂದು ಗುರುತಿಸುವ ಪ್ರಕ್ರಿಯೆ ಸಹ ಅವಳಿ ನಗರದಲ್ಲಿ ಜಾರಿಯಲ್ಲಿದೆ. ಸದ್ಯ 35 ಕಂಟೇನ್ಮೆಂಟ್ ಜೋನ್​ಗಳಿವೆ. ಇನ್ನು ಮುಂದೆ ಒಂದು ಮನೆಯಲ್ಲಿ ಒಬ್ಬರು ಸೋಂಕಿತರಿದ್ದರೂ ರೆಡ್ ಟೇಪ್ ಕಂಡು ಬರಲಿದೆ.

ಅಮಾನವೀಯ ನಡೆ: ಹೋಂ ಐಸೋಲೇಷನ್​ನಲ್ಲಿರುವ ಕರೊನಾ ಸೋಂಕಿತರ ಮನೆಯ ಮುಂದೆ ‘ರೆಡ್ ಟೇಪ್’ ಕಟ್ಟುವ ಬಿಬಿಎಂಪಿ ನಿರ್ಧಾರ ಈಗಾಗಲೇ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಅವೈಜ್ಞಾನಿಕ ಹಾಗೂ ಅಮಾನವೀಯ ನಡೆ ಎಂದು ಬೆಂಗಳೂರಿಗರು ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲೂ ಈ ಬಗ್ಗೆ ವಿರೋಧ ವ್ಯಕ್ತವಾಗಿದೆ. ಬಿಬಿಎಂಪಿ ಕಾರ್ಪೆರೇಟರ್​ಗಳು ಸಹ ವಿರೋಧಿಸಿದ್ದಾರೆ. ಹೀಗಿರುವಾಗ ಜನಪ್ರತಿನಿಧಿಗಳ ಆಡಳಿತವಿಲ್ಲದ ಹು-ಧಾ ಮಹಾನಗರ ಪಾಲಿಕೆಯ ನಡೆಯನ್ನು ಇಲ್ಲಿಯ ಸಾರ್ವಜನಿಕರು ಹೇಗೆ ಸ್ವೀಕರಿಸುತ್ತಾರೆಂಬುದನ್ನು ಕಾದು ನೋಡಬೇಕಿದೆ.

ಹೋಂ ಐಸೋಲೇಷನ್​ನಲ್ಲಿರುವ ಕರೊನಾ ಸೋಂಕಿತರು ಮನೆಯಲ್ಲಿಯೇ 17 ದಿನಗಳ ಕಾಲ ಆರೈಕೆಯಲ್ಲಿ ಇರಬೇಕಾಗುತ್ತದೆ. ಈ ಅವಧಿಯಲ್ಲಿ ಅವರು ಮನೆಯಿಂದ ಹೊರಗೆ ಹೋಗುವ ಸಾಧ್ಯತೆಗಳಿರುತ್ತವೆ. ಇದನ್ನು ತಡೆಗಟ್ಟಲು ಸೋಂಕಿತರ ನಿವಾಸದ ಮುಂದೆ ಅಥವಾ ಮನೆಯ ಬಾಗಿಲಿಗೆ ರೆಡ್ ಟೇಪ್ ಕಟ್ಟಲು ನಿರ್ಧರಿಸಲಾಗಿದೆ. | ಡಾ. ಸುರೇಶ ಇಟ್ನಾಳ ಪಾಲಿಕೆ ಆಯುಕ್ತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net