

ಕೋಲಾರ: ಹುತ್ತೂರು ಹೋಬಳಿಯಲ್ಲಿ ಸಾಲ ಸೌಲಭ್ಯ ಸಿಗುತ್ತಿಲ್ಲ ಎಂದು ರೈತರು, ಮಹಿಳೆಯರು ನನ್ನನ್ನು ದೂಷಿಸುವುದರಿಂದ ಪ್ರಯೋಜನವಿಲ್ಲ, ಸೊಸೈಟಿ ತಪ್ಪಿನಿಂದ ಆಗಿರುವ ಪ್ರಮಾದಕ್ಕೆ ನಾನು ಜವಾಬ್ದಾರನಲ್ಲ, ಸೊಸೈಟಿ ಸರಿಯಾಗಿ ಕಾರ್ಯ ನಿರ್ವಹಿಸಿದ್ದರೆ ಸಾಲ ಸಿಗುತ್ತಿತ್ತು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.
ನಗರದ ಡಿಸಿಸಿ ಬ್ಯಾಂಕ್ ಮತ್ತು ಹುತ್ತೂರು ಎಸ್‌ಎಫ್‌ಸಿಎಸ್ ಆಶ್ರಯದಲ್ಲಿ ರೈತರಿಗೆ ಸೋಮವಾರ 1.37 ಕೋಟಿ ರೂ. ಬೆಳೆ ಸಾಲ ವಿತರಿಸಿ ಮಾತನಾಡಿದರು.
ಸೊಸೈಟಿಯ ಹಿಂದಿನ ಆಡಳಿತ ಮಂಡಳಿ ಸಿಬ್ಬಂದಿ ಮೇಲೆ ಹಿಡಿತ ಇಟ್ಟುಕೊಳ್ಳದೇ ಕೆಲ ತಪ್ಪು ಮಾಡಿದ್ದರಿಂದ ಹುತ್ತೂರು ಹೋಬಳಿ ಸಾಲ ಸೌಲಭ್ಯದಿಂದ ವಂಚಿತವಾಗಿತ್ತು. ಬ್ಯಾಂಕ್ ಆಡಳಿತ ಮಂಡಳಿ ಇದೀಗ ರೈತರು ಮತ್ತು ಮಹಿಳೆಯ ಹಿತ ಕಾಪಾಡುವ ಉದ್ದೇಶದಿಂದ ಸೊಸೈಟಿಯಲ್ಲಿ ಬದಲಾವಣೆ ತಂದು ಸಾಲ ನೀಡುತ್ತಿದೆ, ಸೊಸೈಟಿ ಆಡಳಿತ ಮಂಡಳಿ ಇನ್ನು ಮುಂದೆ ಬದ್ಧತೆಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಹುತ್ತೂರು ಹೋಬಳಿಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಅನ್ನದಾತರು ಶೂನ್ಯಬಡ್ಡಿ ಸಾಲ ಸೌಲಭ್ಯದಿಂದ ವಂಚಿನೆಯಾದರೆ ಸಹಿಸಲ್ಲ ಎಂದು ಸೊಸೈಟಿ ಆಡಳಿತ ಮಂಡಳಿಗೆ ಎಚ್ಚರಿಕೆ ನೀಡಿದರು. ಡಿಸಿಸಿ ಬ್ಯಾಂಕ್ ಸಾಲ ಪಡೆಯಲು ಮಾತ್ರವಲ್ಲ, ನಿಮ್ಮ ಉಳಿತಾಯದ ಹಣ ಇಲ್ಲೇ ಠೇವಣಿ ಇಡಬೇಕು. ನಿಮಗೆ ಬಡ್ಡಿ ರಹಿತ ಸಾಲ ನೀಡುವ ನಿಮ್ಮದೇ ಸಂಸ್ಥೆಯನ್ನು ಬೆಳೆಸಿ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ ಮಾತನಾಡಿ, ಹುತ್ತೂರು ಸೊಸೈಟಿಯಲ್ಲಿನ ಹುಳುಕು ಸರಿಪಡಿಸಲಾಗಿದೆ, ಸೊಸೈಟಿ ಆಡಳಿತ ಮಂಡಳಿ ಮತ್ತು ಸಿಇಒಗೆ ಕೆಲಸದಲ್ಲಿ ಬದ್ಧತೆ ಇರಬೇಕು, ಎರಡೂ ಜಿಲ್ಲೆಗಳ ಇತರೆಲ್ಲಾ ಸೊಸೈಟಿಗಳ ವ್ಯಾಪ್ತಿಯ ರೈತರಿಗೆ ಕೋಟ್ಯಂತರ ರೂ. ಬಡ್ಡಿರಹಿತ ಸಾಲ ಸೌಲಭ್ಯ ಸಿಕ್ಕಿದೆ ಎಂದರು.
ಆದರೆ ಸೊಸೈಟಿಯ ಆಡಳಿತ ಮಂಡಳಿ ಮತ್ತು ಸಿಇಒಗೆ ಬದ್ಧತೆ ಇಲ್ಲದ ಕಾರಣ ಇಂದು ಈ ಭಾಗದ ರೈತರು, ತಾಯಂದಿರು ಶೂನ್ಯಬಡ್ಡಿ ಸಾಲ ಸೌಲಭ್ಯದಿಂದ ವಂಚಿತರಾಗಿದ್ದಾರೆ, ಈ ಅನ್ಯಾಯ ಸರಿಪಡಿಸಿಕೊಳ್ಳಿ, ಮತ್ತೆ ಎಂದೂ ಸಹಕಾರಿ ವ್ಯವಸ್ಥೆಯಲ್ಲಿ ತಪ್ಪು ಮಾಡಿ ನಂಬಿಕೆ ಕಳೆದುಕೊಳ್ಳದಿರಿ ಎಂದರು.
ಹುತ್ತೂರು ಎಸ್‌ಎಫ್‌ಸಿಎಸ್ ಅಧ್ಯಕ್ಷ ವಡಗೂರು ರಾಮು ಮಾತನಾಡಿ, ಜಿಲ್ಲೆಯಲ್ಲಿ ಎಲ್ಲ ಸೊಸೈಟಿಗಳ ರೈತರು, ಮಹಿಳೆಯರಿಗೆ ಸಾಲ ಸಿಕ್ಕಿದೆ, ನಮ್ಮ ಹೋಬಳಿ ರೈತರಿಗೆ ಮಾತ್ರ ಅನ್ಯಾಯವಾಗಿದೆ, ಇದನ್ನು ಸರಿಪಡಿಸಲು ಬದ್ಧತೆಯಿಂದ ಕೆಲಸ ಮಾಡುತ್ತೇನೆ, ತಪ್ಪು ನಡೆಯದಂತೆ ಎಚ್ಚರವಹಿಸಲಾಗುವುದು ಎಂದರು.
ಹುತ್ತೂರು ಸೊಸೈಟಿ ಮಾಜಿ ಅಧ್ಯಕ್ಷ ನಡುಪಳ್ಳಿ ಕೃಷ್ಣಮೂರ್ತಿ, ಮುಖಂಡರಾದ ಸಿ.ಎಂ.ನಾರಾಯಣಸ್ವಾಮಿ, ರಮೇಶ್‌ಕುಮಾರ್, ಸಿ.ಎಂ.ರಮೇಶ್, ಅಬ್ಬಣಿ ಸೀನಣ್ಣ, ಚಂದ್ರಶೇಖರ್, ಅಮರಾವತಿ, ಸಿಇಒ ವಿಜಯಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಹಿಂದೆ ಬ್ಯಾಂಕ್ ಶಕ್ತಿಕಳೆದುಕೊಂಡಿತ್ತು, ಬ್ಯಾಲಹಳ್ಳಿ ಗೋವಿಂದಗೌಡರ ನೇತೃತ್ವದ ಆಡಳಿತ ಮಂಡಳಿ ಬಂದ ನಂತರ ಅವರ ಬದ್ದತೆಯಿಂದಾಗಿ ಇಂದು ಕೋಟ್ಯಾಂತರ ರೂ ಸಾಲವನ್ನು ರೈತರು,ತಾಯಂದಿರಿಗೆ ನೀಡಲಾಗಿದೆ. ಎಂ.ಎಲ್.ಅನಿಲ್‌ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕ