ಸೊಸೆಯನ್ನು ಮಣಿಸಿದ ಅತ್ತೆ !

laxmibai patil
Published on

ಬೀದರ್: ತೀವ್ರ ಕುತೂಹಲ ಕೆರಳಿಸಿದ್ದ ಭಾಲ್ಕಿ ತಾಲೂಕಿನ ಮಳಚಾಪುರ ಗ್ರಾಪಂ ವ್ಯಾಪ್ತಿಯ ಖಾನಾಪುರ ವಾಡ್೯ ಚುನಾವಣೆಯಲ್ಲಿ ಅತ್ತೆ ಎದುರು ಸೊಸೆ ಸೋತಿದ್ದಾರೆ.

ಜಿದ್ದಿನ ಹಣಾಹಣಿಯಲ್ಲಿ ಲಕ್ಷ್ಮೀಬಾಯಿ ಚಂದ್ರಶೇಖರ ಪಾಟೀಲ್ ಅವರು 523 ಮತ ಪಡೆದು ತಮ್ಮ ಎದುರಾಳಿ ವಿಜಯಲಕ್ಷ್ಮೀ ಧನರಾಜ ಪಾಟೀಲ್(ಸೊಸೆ) ಅವರನ್ನು 317 ಮತಗಳಿಂದ ಸೋಲಿಸಿದ್ದಾರೆ.

ವಿಜಯಲಕ್ಷ್ಮೀ ಅವರು 206 ಮತಕ್ಕೆ ತೃಪ್ತರಾಗಿದ್ದಾರೆ. ಸಾಮಾನ್ಯ ಮಹಿಳೆಗೆ ವಾಡ್೯ ಮೀಸಲಾಗಿತ್ತು. ಸತತ ಐದು ಬಾರಿ ಈ ಕ್ಷೇತ್ರದಿಂದ ವಿಜಯಲಕ್ಷ್ಮೀ ಅವರ ಪತಿ ಧನರಾಜ ಪಾಟೀಲ್ ಗೆದ್ದು ದಾಖಲೆ ನಿರ್ಮಿಸಿದ್ದರು. ಈ ಸಲ ಸ್ಥಾನ ಮಹಿಳೆಗೆ ಮೀಸಲಾದ ಕಾರಣ ಧನರಾಜ ಅವರು ಪತ್ನಿಯನ್ನು ಕಣಕ್ಕಿಳಿಸಿದ್ದರು. ಇವರಿಗೆ ಸೆಡ್ಡು ಹೊಡೆಯಲು ಯುವ ಮುಖಂಡ ರಾಜಕುಮಾರ ಪಾಟೀಲ್ ಅವರು ತಮ್ಮ ತಾಯಿ ಲಕ್ಷ್ಮೀಬಾಯಿ (ಧನರಾಜ ಅವರ ಚಿಕ್ಕಮ್ಮ) ಅವರಿಗೆ ನಿಲ್ಲಿಸಿದ್ದರು.

ಸಂಬಂಧಿಯಲ್ಲಿ ವಿಜಯಲಕ್ಷ್ಮೀಗೆ ಇವರು ಅತ್ತೆಯಾಗುತ್ತಾರೆ. ಇವರಿಬ್ಬರ ನಡುವೆ ಸ್ಪರ್ಧೆ ಇದ್ದರೂ, ಕುಸ್ತಿ ಮಾತ್ರ ಧನರಾಜ ಮತ್ತು ರಾಜಕುಮಾರ ಅವರ ನಡುವೆ ಬಿದ್ದಿತ್ತು. ಸೊಸೆಗೆ ಸೋಲಿಸಿದ ಅತ್ತೆ ಈಗ ಗ್ರಾಮದಲ್ಲಿ ಪ್ರಭಾವಿ ಎನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net