ಸೊಳ್ಳೆ ನಿಯಂತ್ರಣ ಕುರಿತು ವಿಧಾನಗಳ ಮಾದರಿ ಪ್ರದರ್ಶಿಸಿದ ವಿದ್ಯಾರ್ಥಿಗಳು

ಸೊಳ್ಳೆ ನಿಯಂತ್ರಣ ಕುರಿತು ವಿಧಾನಗಳ ಮಾದರಿ ಪ್ರದರ್ಶಿಸಿದ ವಿದ್ಯಾರ್ಥಿಗಳು
Published on

 ಹಾಸನ: ವಿಶ್ವ ಸೊಳ್ಳೆ ದಿನಾಚರಣೆಯ ಅಂಗವಾಗಿ ನಗರದ ಸಾಲಗಾಮೆ ರಸ್ತೆ ಬಳಿ ಇರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಡಾ.ಬಿ.ಸಿ. ರಾಯ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಸಮಾರಂಭದಲ್ಲಿ ಸೊಳ್ಳೆ ನಿಯಂತ್ರಣ ಕುರಿತು ವಿಧಾನಗಳ ಮಾದರಿಯನ್ನು ಶಾಲಾ ಮಕ್ಕಳು ಪ್ರದರ್ಶಿಸಿ ಗಮನ ಸೆಳೆದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವಸ್ವಾಮಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಭಾರತೀಯ ಮೂಲದ ಬ್ರಿಟನ್ ವೈದ್ಯ ರೊನಾಲ್ಡ್ ರಾಸ್ ಅವರು ಮನುಷ್ಯನಿಂದ ಮನುಷ್ಯನಿಗೆ ಮಲೇರಿಯಾ ಹರಡಲು ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಯೇ ಕಾರಣ ಎಂಬ ವಿಷಯವನ್ನು 1897ರ ಆಗಸ್ಟ್ 20ರಂದು ಕಂಡು ಹಿಡಿದಿದರು. ಈ ಸಂಶೋಧನೆಯ ನೆನಪಾಗಿ ಸೊಳ್ಳೆ ದಿನ ಆಚರಿಸಲಾಗುತ್ತದೆ. ರೊನಾಲ್ಡ್ ರಾಸ್ 1902ರಲ್ಲೇ ವಿಶ್ವ ಸೊಳ್ಳೆ ದಿನ ಎಂದು ಮೊದಲ ಬಾರಿಗೆ ಘೋಷಿಸಿದರು. ಅಂದಿನಿಂದ ಪ್ರತಿ ವರ್ಷ ವಿಶ್ವ ಸೊಳ್ಳೆ ದಿನವನ್ನು ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಹಾಸನ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳು ಸೊಳ್ಳೆ ನಿಯಂತ್ರಣದ ಕುರಿತು ತಾವೇ ಮಾಡಿಕೊಂಡು ಬಂದಿದ್ದ ಮಾದರಿ ಪ್ರದರ್ಶನ ಆಕರ್ಷಿಸಿತು. ಸೊಳ್ಳೆಗಳ ನಿಯಂತ್ರಣ ಹಾಗೂ ಅಪಾಯಗಳ ಬಗ್ಗೆ ಸುದ್ದಿಗಾರರೊಂದಿಗೆ ವಿದ್ಯಾರ್ಥಿಗಳಾದ ರಮೇಶ್, ಮಾನ್ಯತಾ, ಕಾಂಚಾನಾ ಮಾತನಾಡಿ, ಸೊಳ್ಳೆ ಎಂದರೆ ತಕ್ಷಣ ಕೆಲವರಿಗೆ ಕಿರಿಕಿರಿ ಇನ್ನೂ ಕೆಲವರಿಗೆ ಭಯ. ರಾತ್ರಿ, ಹಗಲು ಎನ್ನದೇ ಮಲಗಲು ಬಿಡದೆ ಕಿವಿಯ ಬಳಿ ಗುಂಯ್ ಗುಡುತ್ತಿದ್ದರೆ ಎಂತಹವರಿಗೂ ಕೋಪ ತರುಸುತ್ತವೆ. ಸೊಳ್ಳೆಗಳು ಕಿರಿಕಿರಿ ಉಂಟು ಮಾಡುವುದು ಮಾತ್ರವಲ್ಲದೆ ಬಹಳ ಅಪಾಯಕಾರಿ ಕೂಡಾ ಹೌದು. ಸೊಳ್ಳೆಗಳು ಹಲವು ರೋಗಗಳಿಗೆ ಕಾರಣವಾಗಬಹುದು. ಅದರಲ್ಲೂ ದೊಡ್ಡ ದೊಡ್ಡ ರೋಗಗಳಾದ ಮಲೇರಿಯಾ, ಚಿಕೂನ್‌ಗುನ್ಯಾ, ಡೆಂೆ, ಝೀಕಾ ವೈರಸ್, ಹಳದಿ ಜ್ವರ ಮುಂತಾದ ರೋಗಗಳು ಬರುವುದು ಸೊಳ್ಳೆಗಳಿಂದ. ಪ್ರತಿ ವರ್ಷ ಸೊಳ್ಳೆಗಳಿಂದ ಹರಡುವ ರೋಗಗಳಿಂದ ಸುಮಾರು ಐದು ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ ಎಂದರು.

ಮಲೇರಿಯಾ ರೋಗವು ಸೊಳ್ಳೆಗಳಿಂದ ಹರಡುತ್ತದೆ. ಸೊಳ್ಳೆಯಿಂದ ಹರಡುವ ಮಲೇರಿಯಾ ರೋಗ ಇತಿಹಾಸದಲ್ಲೇ ಮಾರಕ ಕಾಯಿಲೆ ಎಂದು ಹೇಳಲಾಗುತ್ತದೆ. ಮಲೇರಿಯಾ ಕೊರೊನಾ ರೋಗಕ್ಕಿಂತ ಅಪಯಾಕಾರಿ ಎನ್ನಲಾಗಿದೆ ಎಂದು ಸೊಳ್ಳೆಗಳಿಂದ ಆಗುವ ಅಪಾಯ ರೋಗಗಳ ಬಗ್ಗೆ ವಿದ್ಯಾರ್ಥಿಗಳು ಸವಿಸ್ತಾರವಾಗಿ ತಿಳಿಸಿಕೊಟ್ಟರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net