

ಶ್ರೀರಂಗಪಟ್ಟಣ: ಸಾರ್ವಜನಿಕರು ಸೊಳ್ಳೆಗಳ ಜೀವನ ಚಕ್ರ ತಿಳಿಯುವ ಮೂಲಕ ಸೊಳ್ಳೆ ಕಡಿತದಿಂದ ಪಾರಾಗಿ ಅವುಗಳಿಂದ ಬರುವ ರೋಗಗಳನ್ನು ತಡೆಯೋಣ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಸಲಹೆ ನೀಡಿದರು.
ತಾಲೂಕಿನ ಗಣಂಗೂರು ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬುಧವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಕೆ.ಶೆಟ್ಟಹಳ್ಳಿ ವತಿಯಿಂದ ಆಯೋಜಿಸಿದ್ದ ವಿಶ್ವ ಸೊಳ್ಳೆ ದಿನ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯನ ಆರೋಗ್ಯದ ಮೇಲೆ ಕೇಡು ಉಂಟು ಮಾಡುವ ಸೊಳ್ಳೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಸೊಳ್ಳೆಗಳ ಕಡಿತ ತಪ್ಪಿಸಿಕೊಳ್ಳುವ ವಿಧಾನಗಳ ಅರಿವನ್ನು ಮೂಡಿಸುವುದಕ್ಕಾಗಿ ಪ್ರತಿ ವರ್ಷ ಆ.20ರಂದು ವಿಶ್ವ ಸೊಳ್ಳೆಗಳ ದಿನವನ್ನು ಆಚರಿಸಲಾಗುತ್ತದೆ. 1897ರ ಆ.20ರಂದು ಬ್ರಿಟಿಷ್ ಸೇನೆಯ ಸರ್ಜನ್ ಸರ್ ರೊನಾಲ್ಡ್ ರಾಸ್ ಎನ್ನುವ ಜೀವ ವಿಜ್ಞಾನಿಯು ಜನರಿಗೆ ಮೃತ್ಯುಕೂಪವೆನ್ನಿಸುವ ಮಲೇರಿಯಾ ರೋಗವು ಪ್ಯಾರಸೈಟ್ ಮೂಲಕ ಹರಡಲು ಅನಾಫಿಲಿಸ್ ಎನ್ನುವ ಹೆಣ್ಣು ಸೊಳ್ಳೆ ಕಾರಣವೆಂದು ಜಗತ್ತಿಗೆ ವಿವರಿಸಿದ ದಿನವಾಗಿದೆ. ಈ ಸೊಳ್ಳೆಯು ಇಷ್ಟೊಂದು ಭೀಕರ, ಆಘಾತಕಾರಿ ವ್ಯಾಧಿ ಹರಡುತ್ತದೆ ಎಂಬ ಕಲ್ಪನೆಯು ಜನರಿಗೆ ಅದುವರೆಗೂ ಇರಲಿಲ್ಲ. ಹೀಗೆ ಅರಿವು ಮೂಡಿಸಿದ ಆ ವಿಜ್ಞಾನಿಯ ನೆನಪಿಗಾಗಿ ಪ್ರತಿವರ್ಷ ಆ.20ರಂದು ವಿಶ್ವ ಸೊಳ್ಳೆಗಳ ದಿವಸವೆಂದು ಆಚರಿಸಲಾಗುತ್ತಿದೆ ಎಂದರು.
ಸಾಂಕ್ರಾಮಿಕ ರೋಗ ಶಾಸ್ತ್ರಜ್ಞ ಮೇಘನಾ ಮಾತನಾಡಿ, ಸೊಳ್ಳೆಗಳ ಬೆಳವಣಿಗೆ ಹಂತಗಳಾದ ಮೊಟ್ಟೆಗಳ ಹಂತ, ಲಾರ್ವಾ ಹಂತ, ಪೂಪ ಹಂತ ಹಾಗೂ ವಯಸ್ಕ ಹಂತ ಎಂಬ ಸೊಳ್ಳೆಗಳ ಪ್ರಾತ್ಯಕ್ಷಿಕೆ ಮೂಲಕ ತೋರಿಸಿ ಸೊಳ್ಳೆಯ ಕಡಿತ ಚಿಕ್ಕದಾದರೂ ಆದರ ಭೀತಿ ದೊಡ್ಡದು ಸೊಳ್ಳೆಗಳ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಮಾತನಾಡಿ, ಮಲೇರಿಯಾ ರೋಗದ ಲಕ್ಷಣಗಳು, ಸೊಳ್ಳೆ ಕಡಿತದಿಂದ ತಪ್ಪಿಸಿಕೊಳ್ಳಲು ರಕ್ಷಣಾ ವಿಧಾನಗಳು ಹಾಗೂ ಮುಂಜಾಗ್ರತಾ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಪಿ.ಫಣೀಂದ್ರ ಸೊಳ್ಳೆಗಳ ನಿಯಂತ್ರಣ ಕುರಿತಾದ ಪ್ರತಿಜ್ಞಾ ವಿಧಿ ಬೋಧಿಸಿದರು.
ವಸತಿ ಶಾಲೆಯ ಉಪಪ್ರಾಂಶುಪಾಲ ಯೋಗೇಶ್, ಪ್ರಭಾರ ನಿಲಯಪಾಲಕ ಮಧುಸೂದನ್, ಉಪನ್ಯಾಸಕರಾದ ಶಿಲ್ಪಶ್ರೀ, ವಸಂತ, ವಿದ್ಯಾಶ್ರೀ, ಮಾಲಾ, ಸಮುದಾಯ ಆರೋಗ್ಯ ಅಧಿಕಾರಿ ಪ್ರಕೃತಿ ಹಾಗೂ ಆಶಾ ಕಾರ್ಯಕರ್ತೆ ಭಾಗ್ಯಾ ಇತರರು ಹಾಜರಿದ್ದರು.