

ಶಿವಪ್ಪ ಹಿತ್ಲರ್, ಸೊರಬ
ಶಿಕ್ಷಕರ ಕಾಳಜಿಯಿಂದ ಪಟ್ಟಣದ ಸರ್ಕಾರಿ ಪ್ರೌಢಶಾಲೆ ಉತ್ತಮ ಶಿಕ್ಷಣ ನೀಡುವ ಜತೆಗೆ ಹಾಗೂ ಪರಿಸರ ಸ್ನೇಹಿ ಶಾಲೆಯಾಗಿ ರೂಪುಗೊಂಡಿದೆ. ಇದೀಗ ಎಲ್ಲರ ಚಿತ್ತ ಶಾಲೆಯತ್ತ ನೆಟ್ಟಿದೆ.
ಪಟ್ಟಣದ ಹೊರವಲಯದಲ್ಲಿ 2005-2006ನೇ ಶೈಕ್ಷಣಿಕ ಸಾಲಿನಲ್ಲಿ ಈ ಸರ್ಕಾರಿ ಪ್ರೌಢಶಾಲೆ ಆರಂಭವಾದಾಗ ಶಾಲೆಗೆ ಅಂದು ಯಾವುದೇ ಮೂಲ ಸೌಕರ್ಯವಿಲ್ಲದೆ ಹಲವಾರು ವರ್ಷ ಸೊರಗಿತ್ತು. ಹೆಸರಿಗೆ ಮಾತ್ರ ಪಟ್ಟಣ ಶಾಲೆ. ಆದರೆ ಇಲ್ಲಿಗೆ ಸೇರುವ ಮಕ್ಕಳು ಮಾತ್ರ ಗ್ರಾಮೀಣ, ಕೂಲಿ ಕಾರ್ಮಿಕರ ಮಕ್ಕಳು. ಅಲ್ಲದೆ ಕಡಿಮೆ ಅಂಕಗಳಿಸಿದ ವಿದ್ಯಾರ್ಥಿಗಳೇ ಇಲ್ಲಿ ದಾಖಲಾಗುವುದು ಹೆಚ್ಚು. ಒಂದು ಕಡೆ ಮೂಲ ಸೌಕರ್ಯ ಪಡೆಯುವ ಸವಾಲು. ಮತ್ತೊಂದೆಡೆ ಹೆಚ್ಚು ಪ್ರತಿಭಾವಂತರಲ್ಲದ ವಿದ್ಯಾರ್ಥಿಗಳೇ ಹೆಚ್ಚಿದ್ದರಿಂದ ಉತ್ತಮ ಫಲಿತಾಂಶ ನೀಡುವ ಹೊಣೆಗಾರಿಕೆ. ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತ ಈ ಸರ್ಕಾರಿ ಶಾಲೆ ಇದೀಗ ಉತ್ತಮ ಶಿಕ್ಷಣದ ಜತೆಗೆ ಪರಿಸರ ಸ್ನೇಹಿ ಶಾಲೆಯಾಗಿದೆ. ಯಾವುದೇ ಪ್ರತಿಷ್ಠಿತ ಶಾಲೆಗಳಿಗೆ ಕಡಿಮೆ ಇಲ್ಲದಂತೆ ರೂಪುಗೊಂಡಿದೆ.
ಪಟ್ಟಣದ ಸರ್ಕಾರಿ ಪ್ರೌಢಶಾಲೆ ಸುಮಾರು 8 ಎಕರೆ ಜಾಗ ಹೊಂದಿದೆ. ಈ ಪೈಕಿ ಮೂರು ಎಕರೆ ವಿಸ್ತೀರ್ಣದಲ್ಲಿ ಶಾಲೆ ಮತ್ತು ಪರಿಸರ ಬೆಳೆಸಲಾಗಿದೆ. ಉಳಿದ ಪ್ರದೇಶವನ್ನು ಸಮತಟ್ಟು ಮಾಡಬೇಕಿದೆ. ಐದು ವರ್ಷಗಳ ಹಿಂದೆ ಮುಖ್ಯ ಶಿಕ್ಷಕರಾಗಿ ಶಾಲೆಗೆ ಆಗಮಿಸಿದ ಪಿ.ಮಾರುತಿ ಅವರ ವಿಶೇಷ ಕಾಳಜಿ, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಿಂದ ಶಾಲೆಯ ವಿಶಾಲ ಜಾಗದಲ್ಲಿ ಗಿಡಗಳನ್ನು ಬೆಳೆಸಿ, ಪರಿಸರ ಸ್ನೇಹಿ ಶಾಲೆಯನ್ನಾಗಿ ಮಾಡಲಾಗಿದೆ.
ಹೊಂಗೆ, ಸಾಗವಾನಿ, ಸಂಪಿಗೆ, ಹಲಸು, ಮಹಾಗನಿ, ಹೆಬ್ಬೇವು, ಮತ್ತಿ, ನೇರಳೆ, ಅರಳಿ, ಕಾಡುನೆಲ್ಲಿ, ಪೇರಲೆ, ಬೀಟೆ, ಶಿವನೆ, ಗೋಡಂಬಿ, ಹಿಪ್ಪೆ, ಹೊನ್ನೇರಳೆ, ನಿಂಬೆ, ಪಪ್ಪಾಯಿ, ಮಾವು, ಅಶೋಕಗಿಡ, ಬಸವನ ಗಿಡ, ಹೊಂಬಾಳೆ, ತೆಂಗಿನ ಗಿಡ, ನುಗ್ಗೆ, ಮಲ್ಲಿಗೆ, ದಾಸವಾಳ ಸೇರಿ ವಿವಿಧ ಜಾತಿಯ ಗಿಡಗಳು, ಹೂವು, ಹಣ್ಣು ಮತ್ತು ಪರಿಸರಕ್ಕೆ ಪೂರಕವಾದ ಗಿಡಗಳನ್ನು ಬೆಳೆಸಲಾಗಿದೆ. ಇದರಿಂದ ಸುಂದರ ಪರಿಸರ ನಿರ್ಮಾಣಗೊಂಡು ಶಾಲೆಯ ಅಂದವನ್ನು ಹೆಚ್ಚಿಸಿದೆ.
ಇಲ್ಲಿ ವಿವಿಧ ಪಕ್ಷಿಗಳು ಗೂಡನ್ನು ಕಟ್ಟಿ, ಸಂತಾನೋತ್ಪತ್ತಿ ಮಾಡಿಕೊಳ್ಳುತ್ತವೆ. ಅವು ಮರಿಗಳೊಂದಿಗೆ ಹಾರಾಡುವುದು ಇಲ್ಲಿನ ಮತ್ತೊಂದು ಆಕರ್ಷಣೆ. ಶಾಲಾ ವಾತಾವರಣದಲ್ಲಿ ಒಮ್ಮೆ ಓಡಾಡಿದರೆ ಮನಸ್ಸಿಗೆ ಉಲ್ಲಾಸ ಉಂಟಾಗುತ್ತದೆ. ದಾರಿಹೋಕರನ್ನು ಕೈಬೀಸಿ ಕರೆಯುವಂತೆ ಶಾಲಾ ಪರಿಸರ ನಿರ್ಮಾಣವಾಗಿದೆ.
ಫಲಿತಾಂಶ ಹೆಚ್ಚಳ
ಪ್ರೌಢಶಾಲೆಯ ಶಿಕ್ಷಕರು ಕೇವಲ ಪರಿಸರ ಬೆಳೆಸಲು ಮಾತ್ರ ಸೀಮಿತವಾಗದೆ ಗುಣಮಟ್ಟದ ಶಿಕ್ಷಣ ನೀಡುವಲ್ಲೂ ಮುಂದಿದ್ದಾರೆ. ಕೂಲಿ ಕಾರ್ಮಿಕರು ಹಾಗೂ ರೈತರ ಮಕ್ಕಳನ್ನು ತಿದ್ದಿ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಗಳಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಶೇ.85ರಷ್ಟಿದ್ದ ಫಲಿತಾಂಶ ಇದೀಗ ಶೇ.96ಕ್ಕೆ ಏರಿಕೆಯಾಗಿದೆ. ಶಾಲೆಯಲ್ಲಿ ಈಗ 8 ರಿಂದ 10ನೇ ತರಗತಿವರೆಗೆ 120 ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ.
ಬಿಸಿಯೂಟಕ್ಕೆ ಕೈತೋಟದ ತರಕಾರಿ
ಮಕ್ಕಳ ಸಹಾಯದಿಂದ ಕೈತೋಟ ನಿರ್ಮಾಣ ಮಾಡಿ ಮೂಲಂಗಿ, ಬೆಂಡೆ, ಹರಿವೆ ಸೊಪ್ಪು, ಬೀನ್ಸ್, ಸೌತೆಕಾಯಿ, ಪಾಲಕ್ ಸೊಪ್ಪು ಬೆಳೆಯಲಾಗಿದೆ. ಮಕ್ಕಳ ಬಿಸಿ ಊಟಕ್ಕೆ ಈ ಕೈತೋಟದ ತರಕಾರಿಯನ್ನೇ ಬಳಸಲಾಗುತ್ತಿದೆ. ಹೀಗೆ ಪಟ್ಟಣದಲ್ಲಿ ಗ್ರಾಮೀಣ ಪರಿಸರದ ರೀತಿ ವಾತಾವರಣ ನಿರ್ಮಿಸಿರುವ ಈ ಶಾಲೆ ಇತರೆ ಶಾಲೆಗಳಿಗೆ ಮಾದರಿಯಾಗಿದೆ.
ಮೂಲ ಸೌಕರ್ಯ ಅಗತ್ಯ
ಬಾಲಕರ ಶೌಚಗೃಹ ಕಟ್ಟಡ, ಬಾಕಿ ಉಳಿದಿರುವ ಕಾಂಪೌಂಡ್ ನಿರ್ಮಾಣ, ಹೆಚ್ಚುವರಿ ಶಾಲಾ ಕೊಠಡಿ, ಗ್ರಂಥಾಲಯ, ಪ್ರಯೋಗಾಲಯ ಹಾಗೂ ಕಂಪ್ಯೂಟರ್ ಕೊಠಡಿ ಅಗತ್ಯವಿದೆ. ಈ ಬಗ್ಗೆ ಕ್ಷೇತ್ರದವರೇ ಆದ ಆದ ಶಿಕ್ಷಣ ಸಚಿವರು ಗಮನಹರಿಸಿ ಸೌಲಭ್ಯ ಒದಗಿಸಬೇಕಿದೆ.
ಐದು ವರ್ಷಗಳ ಹಿಂದೆ ಶಾಲೆ ಆವರಣದಲ್ಲಿ ಕೆಲವರು ರಾತ್ರಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದರು. ಎಸ್‌ಡಿಎಂಸಿ, ಅರಣ್ಯ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆ ಸಹಯೋಗದಲ್ಲಿ ಮತ್ತು ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಸುತ್ತಲೂ ಗಿಡಗಳನ್ನು ನೆಟ್ಟು ಪರಿಸರ ನಿರ್ಮಾಣ ಮಾಡಿ ಕಲಿಕೆಗೆೆ ಪೂರಕ ವಾತಾವರಣ ನಿರ್ಮಿಸಿದ್ದೇವೆ. ಉಳಿದ ಜಾಗವನ್ನು ಸಮತಟ್ಟು ಮಾಡಿದರೆ ಮತ್ತಷ್ಟು ಗಿಡಗಳನ್ನು ನೆಡಬಹುದು.
ಪಿ.ಮಾರುತಿ, ಮುಖ್ಯ ಶಿಕ್ಷಕ
7ಎಸ್‌ಒಆರ್ ಮಾರುತಿಮುಖ್ಯ ಶಿಕ್ಷಕರ ವಿಶೇಷ ಕಾಳಜಿ ಹಾಗೂ ಶಿಕ್ಷಕರ ಸಹಕಾರದಿಂದ ಒಂದು ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗೆ ಕಡಿಮೆ ಇಲ್ಲದ ರೀತಿ ರೂಪಿಸಲಾಗಿದೆ. ಉತ್ತಮ ಶಿಕ್ಷಣ ನೀಡುವ ಜತೆಗೆ ಪರಿಸರ ಸ್ನೇಹಿ ಶಾಲೆಯಾಗಿ ಹೇಗೆ ರೂಪಿಸಬಹುದು ಎಂಬುದಕ್ಕೆ ಈ ಶಾಲೆ ಉದಾಹರಣೆ. ಶಿಕ್ಷಕವೃಂದದ ಶ್ರಮ ಹೆಮ್ಮೆಯ ವಿಷಯ.
ಭುವನೇಶ್ ಕಪ್ಪಗಳಲೆ, ಎಸ್‌ಡಿಎಂಸಿ ಅಧ್ಯಕ್ಷ