

ಸೊರಬ: ಅಧಿಕಾರಿಗಳು ಜನರೊಂದಿಗೆ ಮುಖಾಮುಖಿಯಾಗಿ ಚರ್ಚೆ ನಡೆಸಿದಾಗ ಸಮಸ್ಯೆಗಳ ಅರಿವಾಗಿ ಅವುಗಳನ್ನು ಪರಿಹರಿಸಲು ಸಾಧ್ಯವಾಗಲಿದೆ ಎಂದು ತಹಸೀಲ್ದಾರ್ ಮೋಹನ್ ಭಸ್ಮೆ ಹೇಳಿದರು.
ತಾಲೂಕಿನ ಗುಂಜನೂರು ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ತಹಸೀಲ್ದಾರ್ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮ ಮಟ್ಟದಲ್ಲಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಉದ್ದೇಶ ಸರ್ಕಾರದ್ದಾಗಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅಧಿಕಾರಿಗಳು ಶ್ರಮಿಸಬೇಕಿದೆ ಎಂದರು.
ಸಾಗರ ಉಪವಿಭಾಗಾಧಿಕಾರಿ ಡಾ. ಪಲ್ಲವಿ ಸಾತೇನೂರು ಮಾತನಾಡಿ, ಜನಪರವಾದ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅನೇಕ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದು, ತ್ವರಿತವಾಗಿ ಇತ್ಯರ್ಥ ಆಗಬೇಕಿರುವ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಪರಿಹರಿಸುವುದಾಗಿ ತಿಳಿಸಿದರು.
ತಾಪಂ ಇಒ ಕೆ.ಜಿ.ಕುಮಾರ ಮಾತನಾಡಿ, ಗ್ರಾಮಸ್ಥರು ಹಲವು ಸಮಸ್ಯೆಗಳ ಬಗ್ಗೆ ಅಹವಾಲು ಸಲಿಸಿದ್ದು, ಕೂಲಂಕಷವಾಗಿ ಪರಿಶೀಲಿಸಿ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಯೋಜನೆಗಳ ಸಾಕಾರಕ್ಕೆ ಸ್ಥಳೀಯರ ಸಹಕಾರ ಮುಖ್ಯ ಎಂದರು.
ರಸ್ತೆ, ಕುಡಿಯುವ ನೀರು, ಬೀದಿ ದೀಪ, ಖಾತೆ ಬದಲಾವಣೆ, ಸ್ಮಶಾನ ಜಾಗ, ದಾಖಲೆಗಳನ್ನು ಒದಗಿಸಲು ತಾಂತ್ರಿಕ ದೋಷ, ಅನಿಯಮಿತ ವಿದ್ಯುತ್ ಲೋಡ್ ಶೆಡ್ಡಿಂಗ್, ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಸಾರ್ವಜನಿಕರಿಗೆ ಸಿಗದಿರುವುದು ಹೀಗೆ ಹಲವು ಸಮಸ್ಯೆಗಳ ಬಗ್ಗೆ ಸಾರ್ವಜನಿಕರು ಅಹವಾಲು ಸಲ್ಲಿಸಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಧಿಕಾರಿಗಳಿಂದ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.
ಇತ್ತೀಚಿಗೆ ತಾಲೂಕಿನ ವಿವಿಧೆಡೆ ಭತ್ತದ ಬೆಳೆಗೆ ಕಂದು ಜಿಗಿ ಹುಳು ರೋಗ ಕಂಡುಬಂದಿದ್ದು, ಅವಶ್ಯವಿರುವ ಕ್ರಿಮಿನಾಶಕ ಒದಗಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದರು.