

ಸೊರಬ: ರಾಜಕೀಯ, ವೈದ್ಯಕೀಯ, ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವು ಕ್ಷೇತ್ರಗಳು ಉದ್ಯಮಗಳಾಗುತ್ತಿರುವ ದಿನಗಳಲ್ಲಿ ಸಾಹಿತ್ಯ ಕ್ಷೇತ್ರ ಜ್ಞಾನದ ಮಹತ್ವವನ್ನು ಸಾರುತ್ತ ಪಾವಿತ್ರೃ ಉಳಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಕವಯತ್ರಿ ಮಾನ್ಯಾ ಹೇಳಿದರು.
ಶುಕ್ರವಾರ ತಾಲೂಕಿನ ಆನವಟ್ಟಿ ಹೋಬಳಿಯ ಹುಣಸವಳ್ಳಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಜಾನಪದ ಪರಿಷತ್ ಹಮ್ಮಿಕೊಂಡಿದ್ದ ಸೊರಬ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜ್ಞಾನದಿಂದ ಮಾತ್ರ ಸಾಹಿತ್ಯದ ರಚನೆ ಮತ್ತು ಬಳಸುವಿಕೆ ಸಾಧ್ಯ. ಈ ನಿಟ್ಟಿನಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಜ್ಞಾನಕ್ಕೆ ಮಾತ್ರವೇ ಮಹತ್ವವಿದೆ ವಿನಾ, ಹಣ, ಆಮಿಷಗಳಿಗೆ ಅವಕಾಶವಿಲ್ಲ. ಹಣದಿಂದ ಯಾವುದೇ ಕ್ಷೇತ್ರಗಳಲ್ಲಿ ಪದವಿ, ಅಧಿಕಾರ ಪಡೆಯಬಹುದು ಎನ್ನುವ ಭ್ರಮೆಯಲ್ಲಿರುವವರಿಗೆ ಸಾಹಿತ್ಯ ಕ್ಷೇತ್ರ ಒಳ ನುಸುಳಲು ಸಹ ಬಿಡುವುದಿಲ್ಲ. ಸಾವಿರಾರು ವರ್ಷಗಳ ಇತಿಹಾಸ ಮತ್ತು ಪರಂಪರೆ ಇರುವ ಕನ್ನಡ ಭಾಷೆಯ ಬಗ್ಗೆ ಗೌರವಾದಾರಗಳನ್ನು ಪ್ರತಿಯೊಬ್ಬರು ಹೊಂದಬೇಕು. ಆಂಗ್ಲ ಭಾಷೆಯಲ್ಲಿ ಮಾತನಾಡಿದರೆ ಗೌರವ ದೊರೆಯುತ್ತದೆ ಎನ್ನುವ ಕಲ್ಪನೆ ಮತ್ತು ಅಹಂ ತೊರೆದು ಕನ್ನಡ ಭಾಷಾಭಿಮಾನ ಬೆಳೆಸಿಕೊಂಡು ಕನ್ನಡದ ಉಳಿವು, ಬೆಳವಣಿಗೆಗೆ ಕಾರಣರಾಗುವಂತೆ ತಿಳಿಸಿದರು.
ಮಕ್ಕಳನ್ನು ಕೇವಲ ಪಠ್ಯ ಚಟುವಟಿಕೆಗೆ ಸೀಮಿತಗೊಳಿಸದೆ ಸಾಹಿತ್ಯಾಸಕ್ತಿ ಬೆಳೆಸುವ ವಾತಾವರಣ ನಿರ್ಮಿಸುವ ಹೊಣೆ ಪಾಲಕರದ್ದಾಗಿದೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಇಂತಹ ಕಾರ್ಯಕ್ರಮಗಳು ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಆಂಗ್ಲ ಭಾಷೆ ಹಾಸುಹೊಕ್ಕಾಗುತ್ತಿರುವ ಸನ್ನಿವೇಶದಲ್ಲಿ ಕನ್ನಡಕ್ಕೆ ಮೊದಲ ಪ್ರಾಶಸ್ತ್ಯವನ್ನು ನೀಡಬೇಕು. ನಮ್ಮ ಭಾಷೆಯನ್ನು ಪ್ರೀತಿಸಿ, ಇತರ ಭಾಷೆಗಳನ್ನು ಗೌರವಿಸುವ ಗುಣ ಹೊಂದಬೇಕು. ಆದರೆ ಇತರ ಭಾಷೆಗಳಿಗೆ ಮಾರು ಹೋದವರಿಗೆ ಕನ್ನಡದ ಕಂಪು ಅರಿಯುವುದಿಲ್ಲ. ಕನ್ನಡ ಮಾತನಾಡುವವರ ಸಂಖ್ಯೆ ಕ್ಷೀಣಿಸುತ್ತಿರುವ ದಿನಗಳಲ್ಲಿ ಕನ್ನಡದ ಕಂಪನ್ನು ಪಸರಿಸಬೇಕು. ಈ ನಿಟ್ಟಿನಲ್ಲಿ ಸಾಹಿತ್ಯ ವೇದಿಕೆಗಳ ಶ್ರಮ ನಿರಂತರವಾಗಿದೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ. ಮಂಜುನಾಥ ಮಾತನಾಡಿ, ಇಂತಹ ಸಮ್ಮೇಳನಗಳಿಂದ ಕೇವಲ ಕನ್ನಡದ ವೈಭವವನ್ನು ಆನಂದಿಸಿದರೆ ಸಾಲದು, ನಮ್ಮ ಮನೆಯಲ್ಲಿ ಮಕ್ಕಳಿಗೆ ಸರಿಯಾದ ಕನ್ನಡ ಭಾಷೆ ಕಲಿಸಲು ಪ್ರಯತ್ನಿಸಬೇಕು. ಶಿಕ್ಷಕರ ಜವಾಬ್ದಾರಿ ಎಂದು ಸುಮ್ಮನಿರಬಾರದು ಎಂದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಎಸ್. ಶಂಕರ್ ಶೇಟ್ ಆಶಯ ನುಡಿಗಳನ್ನಾಡಿ, ಸದೃಢ ಸಮಾಜಕ್ಕೆ ಸಾಹಿತ್ಯ ಸಹಕಾರಿಯಾಗಿದ್ದು, ದೇಹಕ್ಕೆ ಆಹಾರ ಎಷ್ಟು ಮುಖ್ಯವೂ ಅದರಂತೆ ಜ್ಞಾನಕ್ಕೆ ಪುಸ್ತಕ ಅತ್ಯಂತ ಅವಶ್ಯಕವಾಗಿದೆ. ಮಕ್ಕಳಲ್ಲಿನ ಸೂಪ್ತ ಪ್ರತಿಭೆಗಳನ್ನು ಸಮ್ಮೇಳನಗಳ ಮೂಲಕ ಅರಳಿಸುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ ಎಂದು ಹೇಳಿದರು.
ಕನ್ನಡ ಬಳಸಿ, ಬೆಳೆಸಿ, ಉಳಿಸಿ:
ಕನ್ನಡ ಸಾಹಿತ್ಯ ಕ್ಷೇತ್ರ ಅತ್ಯಂತ ಶ್ರೀಮಂತವಾಗಿದ್ದು ನಾಡಿಗೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದೇ ಇದಕ್ಕೆ ಸಾಕ್ಷಿ. ಬಾಲ್ಯದಿಂದಲೇ ಸಾಹಿತ್ಯಾಸಕ್ತಿ ಬೆಳೆಸಿಕೊಳ್ಳುವುದರಿಂದ ಜ್ಞಾನಮಟ್ಟವೂ ಸಹ ವೃದ್ಧಿಸುತ್ತದೆ. ಕರುನಾಡನ್ನು ಆಂಗ್ಲ ರಾಜಧಾನಿಯನ್ನಾಗಿಸದೆ, ಕನ್ನಡವನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತೆ ಮಾಡುವುದು ಕನ್ನಡಿಗರಾದ ನಮ್ಮೆಲ್ಲರ ಕರ್ತವ್ಯ. ಕನ್ನಡವನ್ನು ಬಳಸಿ, ಬೆಳಸಿ ಮತ್ತು ಉಳಿಸಿ ಎಂದು ಮಾನ್ಯಾ ವಿನಂತಿಸಿದರು.
ತೆರೆದ ವಾಹನದಲ್ಲಿ ಮೆರವಣಿಗೆ:
ತಹಸೀಲ್ದಾರ್ ಡಾ. ಮೋಹನ ಭಸ್ಮೆ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದದರು. ತಾಪಂ ಇಒ ನಾಗರಾಜ ಟಿ.ಅಣ್ವೇಕರ್ ಕನ್ನಡ ಧ್ವಜಾರೋಹಣ ಮಾಡಿದರು. ಸಮ್ಮೇಳನಾಧ್ಯಕ್ಷೆ ಮಾನ್ಯಾ ಅವರನ್ನು ತೆರೆದ ವಾಹನದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಕಲಾತಂಡಗಳೊಂದಿಗೆ ಮೆರವಣಿಗೆ ನಡೆಸಲಾಯಿತು.
ಚಿಣ್ಣರದ್ದೇ ದರ್ಬಾರ್:
ಸೊರಬ ಸರ್ಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಮಂಜುನಾಥ ಗಾವಡಿ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಆನ್‌ಲೈನ್ ಶಿಕ್ಷಣದ ಸಾಧಕ-ಬಾಧಕಗಳ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ವಿವಿಧ ಶಾಲೆಯ ವಿದ್ಯಾರ್ಥಿಗಳು ಅಭಿಪ್ರಾಯ ಮಂಡಿಸಿದರು. ಆನವಟ್ಟಿ ಕೆಪಿಎಸ್ ಶಾಲೆ ವಿದ್ಯಾರ್ಥಿನಿ ವಿನುತಾ ಕವಿಗೋಷ್ಠಿ ಹಾಗೂ ಸೊರಬ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಾನಿಕಾ ಕಥಾಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕೋಟಿಪುರ ಎವರಾನ್ ಇಂಟರ್ ನ್ಯಾಷನಲ್ ಶಾಲೆಯ ವಿದ್ಯಾರ್ಥಿನಿ ಸಾನಿಕಾ ಬಿ. ಗೌಡ ಸಮ್ಮೇಳನ ಉದ್ಘಾಟಿಸಿದರು. ಹುಣಸವಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಸಿ.ವೈ. ಐಶ್ವರ್ಯಾ ಅಧ್ಯಕ್ಷತೆ ವಹಿಸಿದ್ದರು.